ಅಕ್ರಮ ತಂಬಾಕು ಉತ್ಪನ್ನ ಮಾರಾಟಗಾರರ ಮೇಲೆ ಮುಂದುವರಿದ ಕಾರ್ಯಾಚರಣೆ
ಶಿವಮೊಗ್ಗ, ಮಾ. 30: ನಿಯಮ ಉಲ್ಲಂಘಿಸಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನದಲ್ಲಿ ತೊಡಗಿದ್ದವರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ದಿಢೀರ್ ಕಾರ್ಯಾಚರಣೆ ಜಿಲ್ಲೆಯಾದ್ಯಂತ ಮುಂದುವರಿದಿದೆ. ಬುಧವಾರ ಶಿಕಾರಿಪುರ ಪಟ್ಟಣ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಅಧಿಕಾರಿಗಳ ತಂಡವು ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆಯಲ್ಲಿ ಬೆಂಗಳೂರಿನ ಕೇಂದ್ರ ತಂಬಾಕು ನಿಯಂತ್ರಣಾಧಿಕಾರಿ ಡಾ. ಚಂದ್ರಶೇಖರ್, ತಾಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ್, ಇನ್‌ಸ್ಪೆಕ್ಟರ್ ಹರೀಶ್ ಪಾಟೀಲ್, ಗ್ರಾಮಾಂತರ ಠಾಣೆ ಸಬ್ ಇನ್‌ಸ್ಪೆಕ್ಟರ್ ಚಂದ್ರಶೇಖರ್, ಪೇಟೆ ಠಾಣೆ ಪಿಎಸ್‌ಐ ಜಯಪ್ಪ ಸೇರಿದಂತೆ ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ವಿವಿಧ ಹಂತದ ಅಧಿಕಾರಿ - ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ‘ಸಿಗರೇಟ್ ಹಾಗೂ ತಂಬಾಕು ಉತ್ಪನ್ನ ತಿದ್ದುಪಡಿ ಕಾಯ್ದೆ (ಕೊಟ್ಪಾ)’ ಗೆ ವಿರುದ್ಧ್ದವಾಗಿ ಜಿಲ್ಲೆಯ ಹಲವು ಅಂಗಡಿ-ಹೊಟೇಲ್‌ಗಳಲ್ಲಿ ಸಿಗರೇಟ್-ತಂಬಾಕು ಉತ್ಪನ್ನ ಮಾರಾಟ ಮಾಡಲಾಗುತ್ತಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದರೂ ಕೆಲ ಧೂಮ ಪ್ರಿಯರು, ಸಾರ್ವಜನಿಕ ಸ್ಥಳಗಳಲ್ಲಿಯೇ ಎಗ್ಗಿಲ್ಲದೆ ಧೂಮಪಾನ ಮಾಡುತ್ತಿದ್ದರು. ಇದಕ್ಕೆ ಕಡಿವಾಣ ಹಾಕುವುದರ ಜೊತೆಗೆ, ಕಾಯ್ದೆಯನ್ನು ಕಟ್ಟುನಿಟ್ಟಿನ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡವು ಕಳೆದ ಸೋಮವಾರದಿಂದ ಜಿಲ್ಲೆಯಾದ್ಯಂತ ದಿಢೀರ್ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ಶಿವಮೊಗ್ಗ, ಭದ್ರಾವತಿ ನಗರಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಬುಧವಾರ ಶಿಕಾರಿಪುರದಲ್ಲಿ ನಡೆಸಲಾಯಿತು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತಬ್ಬಿಬ್ಬು!: ಅಧಿಕಾರಿಗಳ ತಂಡದ ದಿಢೀರ್ ದಾಳಿಗೆ ಹಲವು ವ್ಯಾಪಾರಸ್ಥರು ಹಾಗೂ ಧೂಮಪಾನಿಗಳು ತಬ್ಬಿಬ್ಬುಗೊಳ್ಳುವಂತಾಯಿತು. ನಿಯಮ ಉಲ್ಲಂಘಿಸಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಹಾಗೂ ಧೂಮಪಾನದಲ್ಲಿ ತೊಡಗಿದ್ದವರಿಂದ ದಂಡ ವಸೂಲಿ ಮಾಡಿತು. ಜೊತೆಗೆ ಇನ್ನು ಮುಂದೆ ಸಮರ್ಪಕವಾಗಿ ನಿಯಮ ಪಾಲನೆ ಮಾಡುವಂತೆ ಸೂಚಿಸುತ್ತಿದ್ದ ದೃಶ್ಯ ಕಂಡುಬಂದಿತು.