ಕೃಷಿ ವಿವಿ ವಿದ್ಯಾರ್ಥಿಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ
ಖಾಸಗಿ ವಿವಿಗಳ ಮಾನ್ಯತೆ ರದು್ದಪಡಿಸಲು ಆಗ್ರಹ
ಶಿವಮೊಗ್ಗ, ಮಾ. 30: ರಾಜ್ಯ ಸರಕಾರವು ಹೊಸ ಖಾಸಗಿ ಕೃಷಿ ವಿಶ್ವ ವಿದ್ಯಾನಿಲಯಗಳಿಗೆ ಅನುಮತಿ ನೀಡಬಾರದು. ಹಾಲಿಯಿರುವ ಖಾಸಗಿ ವಿವಿಯ ಮಾನ್ಯತೆ ರದ್ದುಪಡಿಸಬೇಕು. ಕೃಷಿ ಇಲಾಖೆಯ ಹುದ್ದೆಗಳಿಗೆ ಸರಕಾರಿ ವಿ. ವಿ. ಗಳ ಪದವೀಧರರನ್ನು ನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿ, ನಗರದ ಹೊರವಲಯ ನವುಲೆಯಲ್ಲಿರುವ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಬುಧವಾರದಿಂದ ಕಾಲೇಜು ಆವರಣದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
ರಾಜ್ಯದ ಎಲ್ಲ್ಲ ನಾಲ್ಕು ಕೃಷಿ ವಿವಿಗಳ ವಿದ್ಯಾರ್ಥಿಗಳು ಆಯಾ ಕಾಲೇಜುಗಳ ಆವರಣದಲ್ಲಿ ಮುಷ್ಕರ ನಡೆಸುತ್ತಿದ್ದಾರೆ. ಶಿವಮೊಗ್ಗ ಕೃಷಿ ವಿವಿಯ ಸುಮಾರು 400 ವಿದ್ಯಾರ್ಥಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸಲಾಗುವುದು. ತತ್‌ಕ್ಷಣವೇ ರಾಜ್ಯ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ. ಕೃಷಿ ಸಚಿವರಲ್ಲಿ ಈ ಬಗ್ಗೆ ಮನವಿ ಮಾಡಿದಾಗ, ಅವರು ಧಿಮಾಕಿನ ಉತ್ತರ ನೀಡಿದ್ದಾರೆ. ಕೃಷಿ ಪದವೀಧರರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಮಾತನಾಡಿದ್ದಾರೆ. ಸಚಿವರು ಬಹಿರಂಗವಾಗಿ ವಿದ್ಯಾರ್ಥಿಗಳ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ 2011 ರಿಂದ ಕೃಷಿ ಅಧಿಕಾರಿಗಳ ಹುದ್ದೆಯನ್ನು ಭರ್ತಿಗೊಳಿಸಿಲ್ಲ. ಸುಮಾರು 3 ಸಾವಿರ ಹುದ್ದೆಗಳಲ್ಲಿ ಶೇ. 25 ರಷ್ಟು ಖಾಲಿ ಇವೆೆ. ಜಿಲ್ಲೆಯಲ್ಲಿ 40 ಕೃಷಿ ಸಂಪರ್ಕ ಕೇಂದ್ರಗಳಿದ್ದು, ಅಲ್ಲಿಯೂ ಸಹಾ ಬಹುತೇಕ ಹುದ್ದೆಗಳು ಖಾಲಿ ಇವೆ. ಕೃಷಿ ವಿವಿಯಲ್ಲಿ ಕಲಿತ ಪದವೀಧರರನ್ನು ನೇಮಿಸಿಕೊಳ್ಳುವುದರ ಮೂಲಕ ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ನಿತಿನ್, ಪವನ್, ಭವ್ಯಾ, ಯಮುನಾ ಮತ್ತಿತರರು ಉಪಸ್ಥಿತರಿದ್ದರು.
.
.