ಗ್ರಾಹಕರಿಗೆ ಮೋಸ ಮಾಡುವವರ ವಿರುದ್ಧ ದೂರು ಸಲ್ಲಿಸಿ: ನ್ಯಾ. ಡಿ.ಆರ್. ರೇಣಕೆ
ಕಾರವಾರ, ಮಾ.30: ಸೇವಾ ನ್ಯೂನ್ಯತೆಯನ್ನು ಪ್ರದರ್ಶಿಸಿ ಗ್ರಾಹಕರಿಗೆ ಮೋಸ ಮಾಡುವವರ ವಿರುದ್ಧ ಗ್ರಾಹಕ ವೇದಿಕೆಗೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಆರ್. ರೇಣಕೆ ಕರೆ ನೀಡಿದರು.
ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವೇದಿಕೆ ಆಶ್ರಯದಲ್ಲಿ ಗುರುಭವನದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಹಾರ ಭದ್ರತೆ ನಮ್ಮ ಹಕ್ಕಾಗಿದ್ದು, ವ್ಯಕ್ತಿಯೊಬ್ಬನಿಗೆ ಸಮರ್ಪಕವಾಗಿ ಆಹಾರ ಪೂರೈಕೆ ಆಗದಿದ್ದರೆ ಆತ ಸಂಬಂಧಿಸಿದ ವ್ಯಾಪ್ತಿಯ ಅಧಿಕಾರಿ ವಿರುದ್ಧ ಆಹಾರ ಭದ್ರತಾ ಕಾಯ್ದೆ ಪ್ರಕಾರ ಜಿಲ್ಲಾಕಾರಿಗೆ ದೂರು ಸಲ್ಲಿಸಬಹುದು ಎಂದರು. ರಾಷ್ಟ್ರೀಯ ಗ್ರಾಹಕರ ಹಿತರಕ್ಷಣಾ ಕಾಯ್ದೆಯ 198 ರ ಕುರಿತು ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ ಕಾರ್ಯಾಗಾರ ನಡೆಯಿತು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಡಿ.ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್, ಕಾನೂನು ಮಾಪನಶಾಸ್ತ್ರ ಇಲಾಖೆಯ ಶ್ರೀಕಾಂತ ಬುರಾಣಪುರ ಉಪಸ್ಥಿತರಿದ್ದರು. ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಹಿರಿಯ ಉಪನಿರ್ದೇಶಕ ಸದಾಶಿವ ಮರ್ಜಿ ಸ್ವಾಗತಿಸಿದರು. ಮಾಹಾದೇವ ರಾಣೆ ನಿರ್ವಹಿಸಿದರು.