×
Ad

ಪರಿಶಿಷ್ಟರ ಆರ್ಥಿಕ ಸಬಲೀಕರಣಕ್ಕೆ ಹೊಸ ಯೋಜನೆ ರೂಪಿಸಿ: ಕಾಗೋಡು ಸಲಹೆ

Update: 2016-03-30 22:33 IST

ಬೆಂಗಳೂರು, ಮಾ. 30: ಎಸ್ಟಿಪಿ-ಟಿಎಸ್ಪಿ ಉಪ ಯೋಜನೆಯಡಿ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನ ಸದ್ಬಳಕೆ ಹಾಗೂ ಅವರ ಆರ್ಥಿಕ ಸಬಲೀಕರಣ ದೃಷ್ಟಿಯಿಂದ ವಿಶೇಷ ಯೋಜನೆಗಳನ್ನು ರೂಪಿಸಿ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ ಬಳಿಕ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನು ಬಳಕೆ ಮಾಡಿಲ್ಲ ಎಂದು ಹಲವು ಸದಸ್ಯರು ದೂರಿದ್ದಾರೆಂದು ಸರಕಾರದ ಗಮನಕ್ಕೆ ತಂದರು.
ಗಂಗಾ ಕಲ್ಯಾಣ ಯೋಜನೆಯಡಿ ಈವರೆಗೂ ಕೊಳವೆಬಾವಿಗಳನ್ನು ಕೊರೆಸಿಲ್ಲ. ಪರಿಶಿಷ್ಟರ ಆರ್ಥಿಕ ಸಬಲೀಕರಣ ದೃಷ್ಟಿಯಿಂದ ಕುರಿ-ಕೋಳಿ, ಹಸು-ಎಮ್ಮೆ ಕೊಡುವುದನ್ನು ಬಿಟ್ಟು ಉದ್ಯೋಗಾಧಾರಿತ ಸಣ್ಣ ಕೈಗಾರಿಕೆ, ಹೊಟೇಲ್ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ರಾಜ್ಯದಲ್ಲಿ ಪ್ರತಿ ತಾಲೂಕಿಗೆ ಕನಿಷ್ಠ 100 ಮಂದಿ ಪರಿಶಿಷ್ಟರಿಗೆ ಹೊಸದಾಗಿ ಸ್ಥಳೀಯ ಮಟ್ಟದಲ್ಲಿ ಸಣ್ಣ ಕೈಗಾರಿಕೆ, ಮತ್ತಿತರ ಉದ್ದಿಮೆಗಳನ್ನು ಕೈಗೊಳ್ಳಲು ಸಾಲ ಸೌಲಭ್ಯ ಕಲ್ಪಿಸಲು ಹೊಸ ಯೋಜನೆ ರೂಪಿಸಿದರೆ ಅವರನ್ನು ಆರ್ಥಿಕ ಮತ್ತು ಸಾಮಾಜಿಕ ಸದೃಢಗೊಳಿಸಲು ಸಾಧ್ಯ ಎಂದು ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.
ಹೊಸ ಯೋಜನೆ: ಎಸ್ಟಿಪಿ-ಟಿಎಸ್ಪಿ ಯೋಜನೆಯಡಿ ಪರಿಶಿಷ್ಟರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸ್ಪೀಕರ್ ಸಲಹೆಯಂತೆ ಹೊಸ ಯೋಜನೆ ರೂಪಿಸುತ್ತೇವೆ. ಅಲ್ಲದೆ, ಪರಿಶಿಷ್ಟರಿಗೆ ಮೀಸಲಿಟ್ಟ 19,543 ಕೋಟಿ ರೂ.ಗಳನ್ನು ನಿಶ್ಚಿತವಾಗಿಯೂ ಮುಂದಿನ ವರ್ಷ ವೆಚ್ಚ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

‘ಎಸ್ಟಿಪಿ-ಟಿಎಸ್ಪಿ ಯೋಜನೆಯಡಿ ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನ ಸದ್ಬಳಕೆಗೆ ಅಗತ್ಯ ಯೋಜನೆ ರೂಪಿಸಲಾಗುವುದು. ಪರಿಶಿಷ್ಟರ ಕಲ್ಯಾಣಕ್ಕೆ ಆಯವ್ಯಯದಲ್ಲಿ ಘೋಷಿತ ಹಣ ನಿಗದಿತ ಅವಧಿಯಲ್ಲೇ ವೆಚ್ಚ ಮಾಡುವಂತೆ ಸೂಕ್ತ ಮೇಲುಸ್ತುವಾರಿಯನ್ನು ನಾನೇ ನೋಡಿಕೊಳ್ಳುತ್ತೇನೆ.’
-ಸಿದ್ದರಾಮಯ್ಯ, ಮುಖ್ಯಮಂತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News