×
Ad

ಸುವರ್ಣ ಆರೋಗ್ಯ ಟ್ರಸ್ಟ್ ವ್ಯಾಪ್ತಿಗೆ ಆರ್‌ಎಸ್‌ಬಿವೈ: ಯು.ಟಿ.ಖಾದರ್

Update: 2016-03-30 22:34 IST

ಬೆಂಗಳೂರು, ಮಾ.30: ಕೇಂದ್ರ ಸರಕಾರವು ರಾಷ್ಟ್ರೀಯ ಸ್ವಾಸ್ಥ ಬಿಮಾ ಯೋಜನೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾಯಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಈ ಯೋಜನೆಯನ್ನು ಕಾರ್ಮಿಕ ಇಲಾಖೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾಯಿ ಸುವ ತೀರ್ಮಾನ ಕೈಗೊಂಡಿದೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ರಾಷ್ಟ್ರೀಯ ಸ್ವಾಸ್ಥ ಬಿಮಾ ಯೋಜನೆ(ಆರ್‌ಎಸ್‌ಬಿವೈ)ಯನ್ನು ರಾಜ್ಯ ಸರಕಾರವು ಪ್ರಸಕ್ತ ಸಾಲಿನ ಎ.1ರಿಂದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲು ನಿರ್ಧರಿಸಿದೆ ಎಂದರು.
ಈ ಯೋಜನೆಯಡಿಯಲ್ಲಿ ಅಸಂಘಟಿತ ವಲಯದ ಕಟ್ಟಡ ಮತ್ತು ಕಾಮಗಾರಿ ಕಾರ್ಮಿಕರು, ಪರವಾನಿಗೆ ರೈಲ್ವೆ ಕೂಲಿ ಕಾರ್ಮಿಕರು, ಬೀದಿ ಬದಿ ಪ್ರಜೆಗಳು, ಬೀಡಿ ಕಾರ್ಮಿಕರು, ವಲಸೆ ಕಾರ್ಮಿಕರು, ದೇಶೀಯ ಕಾರ್ಮಿಕರು, ನೈರ್ಮಲ್ಯ ಕಾರ್ಮಿಕರು, ಗಣಿ ಕಾರ್ಮಿಕರು, ರಿಕ್ಷಾ ಎಳೆಯುವವರು, ಚಿಂದಿ ಆಯುವವರು, ಆಟೊ/ಟ್ಯಾಕ್ಸಿ ಚಾಲಕರು, ನೇಕಾರರು ಮತ್ತು ಕುಶಲಕರ್ಮಿಗಳು ಸೇರುತ್ತಾರೆ ಎಂದು ಅವರು ಹೇಳಿದರು.
  ರಾಷ್ಟ್ರೀಯ ಸ್ವಾಸ್ಥ ಬಿಮಾ ಯೋಜನೆಯಿಂದ ರಾಜ್ಯದ 65 ಲಕ್ಷ ಮಂದಿಗೆ ಅನುಕೂಲವಾಗುತ್ತಿದ್ದು, ಈ ಪೈಕಿ 55 ಲಕ್ಷ ಮಂದಿ ಬಿಪಿಎಲ್ ಕಾರ್ಡುದಾರರಿದ್ದಾರೆ. ಈ ಯೋಜನೆ ವ್ಯಾಪ್ತಿಗೆ 1516 ಕಾಯಿಲೆಗಳು ಸೇರಿದ್ದು, 806 ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸಾ ಸೌಲಭ್ಯ ಸಿಗುತ್ತದೆ ಎಂದು ಖಾದರ್ ಹೇಳಿದರು. ಹರೀಶ್ ಸಾಂತ್ವಾನ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನಗೊಳ್ಳುವಂತೆ ಎಲ್ಲಾ ಜಿಲ್ಲಾ ಪ್ರತಿನಿಧಿಗಳ ಮೂಲಕ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲಾಗುವುದು. ಒಂದು ತಿಂಗಳಲ್ಲಿ ಸುಮಾರು 331 ಪ್ರಕರಣಗಳು ದಾಖಲಾಗಿದ್ದು, ಸರಕಾರದ ಪ್ರಯತ್ನಕ್ಕೆ ಸಾಕಷ್ಟು ಪ್ರಶಂಸೆ ಸಿಕ್ಕಿದೆ ಎಂದು ಅವರು ತಿಳಿಸಿದರು.
 ಆದರೆ, ಇನ್ನು ಹಲವಾರು ಭಾಗಗಳಲ್ಲಿ ಪರಿಣಾಮಕಾರಿಯಾಗಿ ಈ ಯೋಜನೆ ಜಾರಿಯಾಗದಿರುವ ಕುರಿತು ದೂರುಗಳು ಬಂದಿವೆ. ಆದುದರಿಂದ, ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಖಾದರ್ ಹೇಳಿದರು.
 ಅಪಘಾತಗಳು ಸಂಭವಿಸಿದಾಗ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವು ನೀಡುವುದನ್ನು ಬಿಟ್ಟು ಭಾವಚಿತ್ರಗಳನ್ನು ಸೆರೆ ಹಿಡಿಯುವುದು, ವಿಡಿಯೋ ಚಿತ್ರೀಕರಣ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಮಾನವೀಯತೆ ಪ್ರದರ್ಶನ ಮಾಡುವುದು ಬಿಟ್ಟು ಭಾವಚಿತ್ರ, ವಿಡಿಯೋ ಬಗ್ಗೆ ಆಲೋಚನೆ ಮಾಡುವುದು ನಾಗರಿಕ ಸಮಾಜಕ್ಕೆ ಶೋಭೆ ತರುವುದಿಲ್ಲ ಎಂದು ಅವರು ಕಿವಿಮಾತು ಹೇಳಿದರು.
ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ 2-3 ದಿನಗಳಲ್ಲಿ ವರದಿ ಕೈಸೇರಲಿದ್ದು, ಆನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News