ರಜನಿಗೆ ಬೆಂಗಳೂರು ಕೋರ್ಟ್ ನೋಟಿಸ್
ಬೆಂಗಳೂರು, ಮಾ.30: ಚಿತ್ರನಟರ ಸಿನೆಮಾಗಳು ಬಿಡು ಗಡೆಯಾದಾಗ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಕಟೌಟ್‌ಗಳ ಮೇಲೆ ಹಾಲಿನ ಅಭಿಷೇಕ ಮಾಡುವುದು ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಆದರೆ ರಜನಿಕಾಂತ್ ವಿಷಯದಲ್ಲಿ ವ್ಯಕ್ತಿಯೋರ್ವರು ಈ ವಿಷಯದಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಡಾ.ಐಎಂಎಸ್ ಮಣಿವಣ್ಣನ್ ಎನ್ನುವವರು ಮಾರ್ಚ್26ರಂದು ಬೆಂಗಳೂರಿನ ಮೆಯೋಹಾಲ್ ನ್ಯಾಯಾಲಯದಲ್ಲಿ ಇಂಜಕ್ಷನ್ ಸೂಟ್ ಫೈಲ್ ಮಾಡಿದ್ದಾರೆ. ಕಟೌಟ್‌ಗೆಹಾಲನ್ನು ಸುರಿಯುವುದರಿಂದ ಲೀಟರ್‌ಗಟ್ಟಲೆ ಹಾಲು ಪೋಲಾಗುತ್ತಿದೆ. ಇದನ್ನೆಲ್ಲ ತಡೆಯಬೇಕು ಅಂತ ಮಣಿವಣ್ಣನ್ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಅಭಿಮಾನದ ಹೆಸರಿನಲ್ಲಿ ರಜನಿಕಾಂತ್ ಕಟೌಟ್‌ಗೆ ಹಾಲು ಸುರಿದು ವೇಸ್ಟ್ ಆಗುವುದನ್ನು ಶಾಶ್ವತವಾಗಿ ನಿಲ್ಲಿಸಬೇಕು. ಖುದ್ದು ರಜನಿ ತಮ್ಮ ಅಭಿಮಾನಿಗಳಿಗೆ ಕ್ಷೀರಾಭಿಷೇಕ ನಿಲ್ಲಿಸುವಂತೆ ಮನವಿ ಮಾಡಬೇಕು. ಈ ನಿಟ್ಟಿನಲ್ಲಿ ಕೋರ್ಟ್ ಸೂಕ್ತ ನಿರ್ದೇಶನ ನೀಡಬೇಕೆಂದು ಮಣಿವಣ್ಣನ್ ಮನವಿ ಮಾಡಿದ್ದಾರೆ.
ದೇಶದ ಅತ್ಯುನ್ನತ ಪದ್ಮ ಪುರಸ್ಕಾರಕ್ಕೆ ಪಾತ್ರವಾಗಿರುವ ರಜನಿಕಾಂತ್ ಕೆಲ ದಿನಗಳಲ್ಲಿ ರಾಷ್ಟ್ರಪತಿಯಿಂದ ಪುರಸ್ಕೃತ ಗೊಳ್ಳಲಿದ್ದಾರೆ. ರಜನಿಗೆ ಪದ್ಮ ಪುರಸ್ಕಾರ ನಡೆಯುವ ದಿನ ತಮಿಳುನಾಡು ಸೇರಿದಂತೆ ಎಲ್ಲೆಡೆ ರಜನಿ ಕಟೌಟ್‌ಗೆ ಅಭಿಮಾನಿಗಳು ಕ್ಷೀರಾಭಿಷೇಕ ನಡೆಯುವ ನಿರೀಕ್ಷೆ ಇದೆ. ಈ ಹಂತದಲ್ಲಿ ಮಣಿವಣ್ಣನ್ ಕೋರ್ಟ್ ಮೊರೆ ಹೋಗಿದ್ದಾರೆ.
ಮಣಿವಣ್ಣನ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ನ್ಯಾಯಾಲಯ ರಜನಿಕಾಂತ್‌ರಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದೆ. ಪ್ರಕರಣವನ್ನು ಎ.11ಕ್ಕೆ ಮುಂದೂಡಿದೆ.