ಆಹ್ವಾನಪತ್ರಿಕೆ ಮರುಮುದ್ರಿಸಿ: ಹೈಕೋರ್ಟ್ ಆದೇಶ
ಬೆಂಗಳೂರು, ಮಾ.30: ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲ್ಪಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂಹೆಸರು ಕೈಬಿಟ್ಟು, ಆಹ್ವಾನ ಪತ್ರಿಕೆಯನ್ನು ಮರು ಮುದ್ರಿಸಿ ಹಂಚಿಕೆ ಮಾಡು ವಂತೆ ಹೈಕೋರ್ಟ್ ವಿಭಾಗೀಯಪೀಠ ಆದೇಶಿಸಿದೆ.
ದೇವಾಲಯದ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಅನ್ಯಧರ್ಮೀಯ ಜಿಲ್ಲಾಧಿಕಾರಿ ಹೆಸರನ್ನು ಮುದ್ರಿಸಿರುವುದನ್ನು ಪ್ರಶ್ನಿಸಿ ಮಹಾಲಿಂಗೇಶ್ವರ ಭಕ್ತವೃಂದ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾ.ರವಿಮಳಿಮಠ್ ಅವರಿದ್ದ ವಿಭಾಗೀಯ ಪೀಠವು, ಜಿಲ್ಲಾಧಿಕಾರಿ ಹೆಸರನ್ನು ಕೈಬಿಟ್ಟು, ಹೆಚ್ಚುವರಿ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಹಂಚಿಕೆ ಮಾಡುವಂತೆ ಸರಕಾರಕ್ಕೆ ಆದೇಶ ನೀಡಿತು.
ಧಾರ್ಮಿಕ ದತ್ತಿ ಇಲಾಖೆಯ ಕಲಂ 7ರಲ್ಲಿ ಹಿಂದೂಯೇತರ ಅಧಿಕಾರಿಗಳು ದೇವಸ್ಥಾನದ ಆಡಳಿತದ ವಿಚಾರದಲ್ಲಿ ಮಧ್ಯೆಪ್ರವೇಶಿಸುವಂತಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೆಸರನ್ನು ಮುದ್ರಿಸಿರುವುದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಎದುರು ವಾದ ಮಂಡಿಸಿದರು.
ಆಹ್ವಾನ ಪತ್ರಿಕೆಯಿಂದ ಜಿಲ್ಲಾಧಿಕಾರಿ ಹೆಸರು ಕೈಬಿಟ್ಟರೆ ಎಲ್ಲವೂ ಸರಿಹೋಗುತ್ತದಾ ಎಂದು ನ್ಯಾಯಪೀಠವು ಅರ್ಜಿದಾರರನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಮಧುಸೂದನ್ ಆರ್.ನಾಯಕ್, ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಹೆಸರನ್ನು ಕೇವಲ ಔಪಚಾರಿಕವಾಗಿ ಪ್ರಕಟಿಸಲಾಗಿದೆ. ಆದರೆ, ಕಾರ್ಯಕಾರಿ ಸಮಿತಿಯಲ್ಲಿ ಅವರ ಹೆಸರು ಇಲ್ಲ ಎಂದರು.
ಆಹ್ವಾನಪತ್ರಿಕೆಯಿಂದ ಜಿಲ್ಲಾಧಿಕಾರಿ ಹೆಸರನ್ನು ತೆಗೆದುಹಾಕಿ, ಆಹ್ವಾನ ಪತ್ರಿಕೆಗಳನ್ನು ಮರು ಮುದ್ರಣ ಮಾಡಿ ಹಂಚಿಕೆ ಮಾಡುವುದಾಗಿ ಅಡ್ವೊಕೇಟ್ ಜನರಲ್ ನೀಡಿದ ಹೇಳಿಕೆಯನ್ನು ಆಧರಿಸಿ ನ್ಯಾಯಪೀಠವು ಅರ್ಜಿಯನ್ನು ಇತ್ಯರ್ಥಪಡಿಸಿತು.
ಪ್ರಕರಣದ ಹಿನ್ನೆಲೆ:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಭಕ್ತಾದಿಗಳನ್ನು ಆಮಂತ್ರಿಸುವವರಾಗಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೆಸರನ್ನು ಮುದ್ರಿಸಿದ್ದನ್ನು ಪ್ರಶ್ನಿಸಿ ಮಹಾಲಿಂಗೇಶ್ವರ ಭಕ್ತವೃಂದ ಮತ್ತು ಪುತ್ತೂರಿನ ವಿಎಚ್‌ಪಿ ಕಾರ್ಯದರ್ಶಿ ನವೀನ್ ಕುಲಾಲ್ ಹೈಕೋರ್ಟ್‌ನಲ್ಲಿ ಪ್ರತ್ಯೇಕವಾಗಿ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ನೇತೃತ್ವದ ವಿಭಾಗೀಯಪೀಠದ ಆದೇಶ ಹಿನ್ನೆಲೆಯಲ್ಲಿ ನ್ಯಾ.ಎ.ಎಸ್.ಬೋಪಣ್ಣ ನೇತೃತ್ವದ ಏಕ ಸದಸ್ಯ ಪೀಠವು, ವಿಭಾಗೀಯಪೀಠವು ಈಗಾಗಲೇ ಈ ಬಗ್ಗೆ ತನ್ನ ಆದೇಶವನ್ನು ನೀಡಿರುವುದರಿಂದ ಈ ಅರ್ಜಿಯು ಮಾನ್ಯತೆ ಕಳೆದುಕೊಂಡಿದೆ ಎಂದು ನವೀಲ್ ಕುಲಾಲ್ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿತು.