×
Ad

ಬುಡಕಟ್ಟು ಜನರಿಂದ ರಸ್ತೆ ತಡೆದು ಪ್ರತಿಭಟನೆ

Update: 2016-03-31 21:49 IST

   ಮಡಿಕೇರಿ, ಮಾ.31: ಅರಣ್ಯವಾಸಿ ಗಿರಿಜನರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಐಟಿಡಿಪಿ ಇಲಾಖೆಯ ಮುಂಭಾಗ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಸರಕಾರ ಸ್ಪಂದಿಸದಿರುವುದನ್ನು ಖಂಡಿಸಿ, ವಿವಿಧ ಬುಡಕಟ್ಟು ಸಂಘಟನೆಗಳು ಗುರುವಾರ ನಗರದ ಜ. ತಿಮ್ಮಯ್ಯ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದವು. ಅಹೋರಾತ್ರಿ ಧರಣಿಯು ನಾಲ್ಕನೆ ದಿನವನ್ನು ಪ್ರವೇಶಿಸಿದ ಹಿನ್ನೆಲೆಯಲ್ಲಿ ಬುಡಕಟ್ಟು ಸಮುದಾಯಗಳ ಒಕ್ಕೂಟದ ಜಿಲ್ಲಾ ಸಂಚಾಲಕ ವೈ.ಪಿ. ತಮ್ಮಯ್ಯ, ಶೈಲೇಂದ್ರ, ಮಹಿಳಾ ಘಟಕದ ಸಂಚಾಲಕಿ ಪ್ರೇಮಾ, ಇಂದಿರಾ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಗಿರಿಜನರು, ಸರಕಾರದ ಧೋರಣೆಯನ್ನು ಖಂಡಿಸಿದರು.

  

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಸಚಿವರು, ಜಿಲ್ಲೆಯ ಶಾಸಕರು ಭೇಟಿ ನೀಡಿ ಗಿರಿಜನ ಸಮೂಹದ ಸಂಕಷ್ಟಗಳನ್ನು ಆಲಿಸಬೇಕು ಮತ್ತು ಗಿರಿಜನರ ಬೇಡಿಕೆಗಳ ಈಡೇರಿಕೆಗೆ ಸಚಿವರು ಮತ್ತು ಜಿಲ್ಲೆಯ ಶಾಸಕರನ್ನು ಒಳಗೊಂಡ ಅನುಷ್ಠಾನ ಸಮಿತಿ ರಚಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನು ನೀಡಿದ ಪ್ರಮುಖರು ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಪ್ರಮುಖ ಬೇಡಿಕೆಗಳು: ಬುಡಕಟ್ಟು ಸಮುದಾಯದ ಆಶ್ರಮ ಶಾಲೆಗಳನ್ನು ಕೇರಳ ರಾಜ್ಯದ ಮಾದರಿಯಲ್ಲಿ ಮೇಲ್ದರ್ಜೆಗೇರಿಸಬೇಕು. ವೀರಾಜಪೇಟೆ ತಾಲೂಕಿನ ದೇವರಪುರ ಪಂಚಾಯತ್ ವ್ಯಾಪ್ತಿಯ ಹೆಬ್ಬಾಲೆ ಬುಡಕಟ್ಟು ಹಾಡಿಯಲ್ಲಿರುವ 130 ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಈ ಭಾಗದ ಪೈಸಾರಿ ಜಾಗದ ವಿವಾದವನ್ನು ಬಗೆಹರಿಸಬೇಕು. ಪೊನ್ನಂಪೇಟೆ ಸಮೀಪದ ಅರವತ್ತೊಕ್ಲು ಗ್ರಾಪಂನ ಹಳ್ಳಿಗಟ್ಟುವಿನ ಬುಡಕಟ್ಟು ಕುಟುಂಬಗಳಿಗೆ ಕೃಷಿ ಭೂಮಿ ನೀಡಬೇಕು, ಕಾಫಿ ತೋಟಗಳ ಲೈನ್ ಮನೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯವನ್ನು ಹೊರ ತಂದು ಪುನರ್ವಸತಿ ಕಲ್ಪಿಸಬೇಕು.

ಗಿರಿಜನ ಮಹಿಳೆಯರಿಗಾಗಿ ಅನುದಾನವನ್ನು ಮೀಸಲಿಡಬೇಕು, ಮಹಿಳೆಯರ ಮತ್ತು ಮಕ್ಕಳ ಆರೋಗ್ಯಕ್ಕಾಗಿ ವಿಶೇಷ ಯೋಜನೆ ರೂಪಿಸಬೇಕು, ಬುಡಕಟ್ಟು ಸಮುದಾಯಗಳನ್ನು ಅಳಿವಿನಂಚಿನಲ್ಲಿರುವ ಸಮುದಾಯಗಳೆಂದು ಗುರುತಿಸಿ ವಿಶೇಷ ಸ್ಥಾನ ಮಾನ ನೀಡಬೇಕು, ರಾಜಕೀಯ ಮೀಸಲಾತಿಯನ್ನು ಕಲ್ಪಿಸಬೇಕು, ಮೀಸಲು ಅರಣ್ಯ ಹಾಗೂ ಅಭಯಾರಣ್ಯದಲ್ಲಿ ವಾಸಿಸುತ್ತಿರುವ ಬಡಕುಟುಂಬಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು, ಅರಣ್ಯ ಹಕ್ಕು ಕಾಯ್ದೆಯಡಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ವಿವಿಧ ಬುಡಕಟ್ಟು ಸಂಘಟನೆಗಳ ಪದಾಧಿಕಾರಿಗಳು ಹಾಗೂ ಹಾಡಿಗಳ ನಿವಾಸಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News