×
Ad

ನಿರಂತರ ವಿದ್ಯುತ್ ಪೂರೈಕೆಗೆ ರೈತರ ಮನವಿ

Update: 2016-03-31 22:10 IST

ಸಾಗರ,ಮಾ.31: ನಿರಂತರ ವಿದ್ಯುತ್ ಪೂರೈಕೆ ಹಾಗೂ ತಾಲೂಕಿನ ಕೆಳದಿ ವಿದ್ಯುತ್ ಮಾರ್ಗವನ್ನು ಜೋಡಿ ಮಾರ್ಗವಾಗಿ ಪರಿವರ್ತಿಸುವಂತೆ ಒತ್ತಾಯಿಸಿ ಗುರುವಾರ ಕಸಬಾ ಹೋಬಳಿ ವ್ಯಾಪ್ತಿಯ ಮಾಸೂರು ಫೀಡರ್ ಮಾರ್ಗದ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಮೆಸ್ಕಾಂ ಕಚೇರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 35ಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ಗುಣಮಟ್ಟದ ವಿದ್ಯುತ್ ಈ ಭಾಗದಲ್ಲಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ಜನರು, ರೈತರು, ವಿದ್ಯಾರ್ಥಿಗಳು ಸಂಕಷ್ಟವನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಸಾಗರದಿಂದ ಸುಮಾರು 35 ಕಿ.ಮೀ. ದೂರದ ಕಣಸೆ ಗ್ರಾಮದವರೆಗೆ ಎಫ್-6 ಮಾರ್ಗವು ಹಾದು ಹೋಗಿದ್ದು, ಹೆಚ್ಚಿನ ವಿದ್ಯುತ್ ಈ ತಂತಿಯಲ್ಲಿ ಹರಿಸಲಾಗುತ್ತಿದೆ. ಇದರಿಂದ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ ಎಂದು ಪ್ರತಿಭಟನಾನಿರತರು ದೂರಿದರು. ಈ ಭಾಗದಲ್ಲಿ 500 ವೋಲ್ಟೇಜ್ ವಿದ್ಯುತ್ ಬೇಡಿಕೆಯಿದ್ದು, ಕೇವಲ 150 ವೋಲ್ಟ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಲೋವೋಲ್ಟೇಜ್‌ನಿಂದಾಗಿ ಕೃಷಿ ಪಂಪ್‌ಸೆಟ್‌ಗಳು ಸುಟ್ಟು ಹೋಗುತ್ತಿವೆ. ಎಫ್-6 ಮಾರ್ಗವು ಶಿರವಾಳ ಹಾಗೂ ತೊರಗೋಡು ಗ್ರಾಮದ ಅಕೇಶಿಯಾ ನೆಡುತೋಪಿನಲ್ಲಿ ಹಾದು ಹೋಗಿರುವುದರಿಂದ ಮಧ್ಯಭಾಗದಲ್ಲಿ ಸಾಕಷ್ಟು ವಿದ್ಯುತ್ ಸೋರಿಕೆಯಾಗುತ್ತಿದೆ. ಪ್ರತಿದಿನ ನಿರಂತರ ಲೋಡ್‌ಶೆಡ್ಡಿಂಗ್ ಬೇರೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು. ತಕ್ಷಣ ತಾಲೂಕಿನ ಬೇರೆಬೇರೆ ಭಾಗಗಳಲ್ಲಿ ನೀಡುತ್ತಿರುವಂತೆ ಕಸಬಾ ಹೋಬಳಿ ವ್ಯಾಪ್ತಿಗೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಕೆಳದಿ ವಿದ್ಯುತ್ ಮಾರ್ಗವನ್ನು ಜೋಡಿ ಮಾರ್ಗವಾಗಿ ಪರಿವರ್ತಿಸಬೇಕು. ತಕ್ಷಣ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸದೆ ಹೋದಲ್ಲಿ ಮೆಸ್ಕಾಂ ಎದುರು ಬೇಡಿಕೆ ಈಡೇರುವವರೆಗೂ ನಿರಂತರ ಧರಣಿ ನಡೆಸಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ದೇವೇಂದ್ರ ಬೆಳೆಯೂರು, ರಮೇಶ್ ಇ. ಕೆಳದಿ, ಅದರಂತೆ ಚೌಡಪ್ಪ, ಕೆ.ಪಿ.ರಾಮಚಂದ್ರ, ದೂಗೂರು ಪರಮೇಶ್ವರ್, ಶಿವಾನಂದ ಕುಗ್ವೆ, ಎಚ್.ಎಸ್.ಮಂಜಪ್ಪ ಕೆಳದಿ, ವೆಂಕಟೇಶ್ ಬೆಳೆಯೂರು, ಸುರೇಶ್ ಟಿ.ಎಚ್. ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News