ಚಂದ್ರಗುತ್ತಿ ಹೋಬಳಿಯ ಬಾವಿಗಳಲ್ಲಿ ಅಚ್ಚರಿ
nಮುಹಮ್ಮದ್ ಆರೀಫ್
ಸೊರಬ,ಮಾ.31: ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿಕೊಂಡಿದ್ದು, ಜನ ಜಾನುವಾರುಗಳು ನೀರಿಗಾಗಿ ಪರದಾಡುತ್ತಿವೆ. ಆದರೆ ಇವೆಲ್ಲದರ ನಡುವೆ, ತಾಲೂಕಿನ ಚಂದ್ರಗುತ್ತಿ ಹೋಬಳಿಯ ಬಂದಿಗೆ ಗ್ರಾಮದಲ್ಲಿನ ಕೆಲವು ತೆರದ ಬಾವಿಗಳಲ್ಲಿ ನೀರು ತುಂಬಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ತಾಲೂಕನ್ನು ರಾಜ್ಯ ಸರಕಾರ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಮತ್ತೊಂದಡೆ ಕುಡಿಯುವ ನೀರಿಗಾಗಿ ಬಹುತೇಕ ಗ್ರಾಮಗಳಲ್ಲಿ ಹಾಹಾಕಾರ ಉಂಟಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನಕ್ಕೆ ಬಹುತೇಕ ಕೆರೆಕಟ್ಟೆ, ಬಾವಿಗಳು ಒಣಗುತ್ತಿರುವ ಬೆನ್ನಲ್ಲೆ ಬಂದಿಗೆ ಗ್ರಾಮದ ಸರಕಾರಿ ಬಾವಿಯೂ ಸೇರಿದಂತೆ ಮೂರು ಖಾಸಗಿ ಬಾವಿಗಳು ಕೆಲ ದಿನಗಳ ಹಿಂದೆ ಸಂಪೂರ್ಣ ಬತ್ತಿದ್ದು, ದುರಸ್ತಿಗೆ ಯೋಜಿಸಲಾಗಿತ್ತು. ಆದರೆ, ಬಾವಿ ಒಣಗಿದ 10-15 ದಿನಗಳ ಬಳಿಕ ಬಾವಿಗೆ ಪೂರ್ವ ದಿಕ್ಕಿನಿಂದ ಸಣ್ಣಗೆ ನೀರು ಜಿನುಗಲಾರಂಭಿಸಿತು. ಜಿನುಗುವಿಕೆಯ ಕೆಲವೇ ಗಂಟೆಗಳಲ್ಲಿ ಬಾವಿಗೆ ಸುಮಾರು 25 ಅಡಿ ನೀರು ಸಂಗ್ರಹವಾಗಿದೆ. ಬರೋಬ್ಬರಿ 45 ಅಡಿ ಆಳದಲ್ಲಿರುವ ಈ ಬಾವಿಗಳಲ್ಲಿ ಈಗ 25 ಅಡಿ ನೀರು ಸಂಗ್ರಹಣೆಯಾಗಿದ್ದು, ದಿನಕ್ಕೆ ಮೂರು ಸಾವಿರ ಲೀಟರ್ ಗೂ ಹೆಚ್ಚು ನೀರು ತೆಗೆೆದರೂ ನೀರಿನ ಮಟ್ಟ ಕಡಿಮೆಯಾಗುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಮಳೆಗಾಲವಲ್ಲದ ದಿನಗಳಾಗಿದ್ದು, ಸಮೀಪದ ನೀರಿನ ಮೂಲಗಳು ಸಹ ಬತ್ತಿವೆ. ಗ್ರಾಮದ ಅಕ್ಕಪಕ್ಕದಲ್ಲಿರುವ ನೀರಿನ ಮೂಲಗಳಿಗೆ ಯಾವುದೇ ಬ್ಯಾರೇಜ್, ಅಣೆಕಟ್ಟುಗಳಿಲ್ಲ, ಪ್ರಕೃತಿ ವಿಸ್ಮಯವನ್ನು ಗ್ರಾಮಸ್ಥರು ಒಳಿತಿಗೋ, ಕೆಡುಕಿಗೋ ಅರ್ಥವಾಗದೇ ತುಸು ಸಂತಸದೊಂದಿಗೆ ತುಸು ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಪ್ರಾದೇಶಿಕವಾಗಿ ಮಲೆನಾಡು ಪ್ರದೇಶವಾಗಿರುವ ಇಲ್ಲಿ ಜಂಬಿಟ್ಟಿಗೆ ಮಣ್ಣು ಇದೆ. ಕುರುಚಲು ಅರಣ್ಯ ಪ್ರದೇಶವಿದ್ದು, ಪೂರ್ವದಿಕ್ಕಿಗೆ ಕಿರು ಎರಡು ಗುಡ್ಡಗಳಿವೆ, ಕಳೆದ ವರ್ಷದಲ್ಲಿ ಈ ಗುಡ್ಡವೂ ಸೇರಿದಂತೆ ಇರುವ ಅಬಸಿ ಅರಣ್ಯ ಪ್ರದೇಶಕ್ಕೆ ಅರಣ್ಯ ಇಲಾಖೆಯವರು ಸಿಪಿಟಿ ತೆಗೆಸಿದ್ದಾರೆ. ಹಾಗಾಗಿ, ಗುಡ್ಡದ ನೀರು ವ್ಯರ್ಥ ಹರಿದು ಹೋಗದೆ ನೀರು ನಿಂತದ್ದೇನೋ ಹೌದು. ತುಸು ಅರಣ್ಯ ರಕ್ಷಣೆಯೂ ಆಗಿದೆ, ಗ್ರಾಮಸ್ಥರು ಅರಣ್ಯ ಲೂಟಿ ಮಾಡದೆ, ಒಂದಿಷ್ಟು ಗಿಡ ಮರಗಳನ್ನು ಸಹಾ ಉಳಿಸಿಕೊಂಡಿದ್ದಾರೆ. ಬಹುತೇಕ ಈ ಸಿಪಿಟಿಯಿಂದಾಗಿ ಹೀಗೆ ನೀರಿನ ಸೆಲೆ ಸೃಜಿಸಿರಬಹುದು ಎಂಬ ಅಭಿಪ್ರಾಯವೂ ಗ್ರಾಮದ ಕೆಲವರಿಂದ ಕೇಳಿಬಂದಿದೆ. ಇನ್ನು ಕೆಲವರು ಹತ್ತಿರದ ಜಮೀನೊಂದರಲ್ಲಿ ಬೋರ್‌ವೆಲ್‌ಲ್ ನಿಂದ ಜಮೀನಿಗೆ ನೀರು ಹಾಯಿಸುತ್ತಿರುವುದರಿಂದ ನೀರು ಬಂದಿದೆ ಎಂಬ ಅಭಿಪ್ರಾಯವಿದೆಯಾದರೂ ಒಮ್ಮತದ ಅಭಿಪ್ರಾಯವಿಲ್ಲ. ಒಂದಡೆ ಅರಣ್ಯ ನಾಶ, ಮತ್ತೊಂದಡೆ ಬೆಳೆಯುತ್ತಿರುವ ವಿಜ್ಞಾನ, ಹಾಗೂ ತಂತ್ರಜ್ಞಾನಗಳು ಎಷ್ಟೇ ಮುಂದು ವರೆದಿದ್ದರೂ ಸಹ ಪ್ರಸ್ತುತ ಕಾಲಘಟ್ಟದಲ್ಲಿ ಪ್ರಕೃತಿ ಒಂದಲ್ಲಾ ಒಂದು ರೀತಿ ವಿಸ್ಮಯವನ್ನು ಸೃಷ್ಟಿಸುತ್ತಾ ಕೆಲವೊಮ್ಮೆ ಎಚ್ಚರಿಕೆಯ ಸಂದೇಶವನ್ನು ನೀಡುತ್ತಿದೆ. ಹಾಗೂ ಕೆಲವೊಮ್ಮೆ ಮನುಷ್ಯನಿಗೆ ಉಪಯೋಗಿಯಾಗಿ ಬದಲಾಗುತ್ತಿದೆ. ಒಟ್ಟಾರೆಯಾಗಿ ನೀರನ್ನು ಅನಾವಶ್ಯಕವಾಗಿ ವ್ಯಯಿಸದೇ, ಮಿತವಾಗಿ ಬಳಸುವ ಮೂಲಕ ನೀರು-ಅರಣ್ಯ ಹಾಗೂ ಪ್ರಕೃತಿಯ ರಕ್ಷಣೆ ನಮ್ಮೆಲ್ಲರೆ ಹೊಣೆಯಾಗಿದೆ