×
Ad

ಮೂರು ವರ್ಷಗಳಲ್ಲಿ 1991 ಮಂದಿ ಜೀತಮುಕ್ತ: ಎಚ್.ಕೆ.ಪಾಟೀಲ್

Update: 2016-03-31 22:35 IST

ಬೆಂಗಳೂರು, ಮಾ.31: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ ಕಳೆದ ಮೂರು ವರ್ಷಗಳಲ್ಲಿ 1991 ಮಂದಿಯನ್ನು ಜೀತ ಪದ್ಧತಿಯಿಂದ ಮುಕ್ತಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
 ಗುರುವಾರ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಎಸ್.ಆರ್.ಮಹೇಶ್ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, 2012-13ರಲ್ಲಿ ತುಮಕೂರು(854), ಯಾದಗಿರಿ(1), 2013-14ರಲ್ಲಿ ತುಮಕೂರು(386), ಮೈಸೂರು(253), 2014-15ರಲ್ಲಿ ಗುಲ್ಬರ್ಗ(26), 2015-16ರಲ್ಲಿ ಮೈಸೂರು(122), ಬೆಂಗಳೂರು ನಗರ(335), ಬಾಗಲಕೋಟೆ(15) ಹಾಗೂ ಉಡುಪಿ(8)ಯಲ್ಲಿ ಜೀತ ಪದ್ಧತಿ ಪ್ರಕರಣಗಳನ್ನು ಪತ್ತೆ ಹಚ್ಚಿ, ಅವರನ್ನು ಜೀತಮುಕ್ತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಗುಲ್ಬರ್ಗ ಜಿಲ್ಲೆಯ 26, ಬೆಂಗಳೂರು ನಗರ ಜಿಲ್ಲೆಯ 335 ಮತ್ತು ಬಾಗಲಕೋಟೆ ಜಿಲ್ಲೆಯ 15 ಸೇರಿದಂತೆ ಜೀತದಾಳುಗಳಾಗಿದ್ದ ಒಟ್ಟು 376 ಮಂದಿ ಬೇರೆ ರಾಜ್ಯಗಳಿಗೆ ಸೇರಿದವರಾಗಿದ್ದು, ಅವರನ್ನು ಜೀತಮುಕ್ತಿಗೊಳಿಸಿದ ನಂತರ ಅವರ ಇಚ್ಛೆಯಂತೆ ಅವರವರ ಸ್ವಂತ ಊರುಗಳಿರುವ ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಜೀತಪದ್ಧತಿ ನಿರ್ಮೂಲನೆಗೆ ಸಂಬಂಧಿಸಿದಂತೆ ಶಿವಾಜಿಗಣೇಶನ್ ಸಮಿತಿ ನೀಡಿರುವ ವರದಿಯಲ್ಲಿನ ಜಾರಿಗೆ ಬರಬೇಕಾದ ಶಿಫಾರಸ್ಸುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಕೋರಿ 2015ನೆ ಸಾಲಿನ ನವೆಂಬರ್‌ನಲ್ಲಿ ಕಾರ್ಮಿಕ, ಕಂದಾಯ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ ಹಾಗೂ ಶಿಕ್ಷಣ ಇಲಾಖೆಗಳಿಗೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರಕಾರವು 2015ನೆ ಸಾಲಿನ ಸೆ.17ರಂದು ಪರಿಷ್ಕೃತ ಮಾರ್ಗಸೂಚಿಯನ್ನು ಕಳುಹಿಸಿದ್ದು, ಪ್ರಸ್ತಾಪಿತ ಮಾರ್ಗಸೂಚಿಯ ಬಗ್ಗೆ ರಾಜ್ಯ ಸರಕಾರದ ಮಾರ್ಗಸೂಚಿ ಮತ್ತು ಅಭಿಪ್ರಾಯವನ್ನು ತಿಳಿಸಲು ಕೋರಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಕೆಲವು ಅಂಶಗಳ ಬಗ್ಗೆ ಸ್ಪಷ್ಟೀಕರಣ ಪಡೆಯುವ ಬಗ್ಗೆ ಕೇಂದ್ರ ಕಾರ್ಮಿಕ ಮಂತ್ರಾಲಯದೊಂದಿಗೆ ಪತ್ರ ವ್ಯವಹರಿಸಲಾಗಿದೆ. ಕೇಂದ್ರ ಸರಕಾರದಿಂದ ಉತ್ತರವನ್ನು ನೀರೀಕ್ಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಿತಿಯ ವರದಿಯ ಅನುಷ್ಠಾನಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಲು ಕ್ರಮವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
 ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದ 845 ಹಾಗೂ 386 ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಪುರಸ್ಕೃತ ಜೀತವಿಮುಕ್ತರ ಪುನರ್ವಸತಿ ಯೋಜನೆಯಡಿ 1.45 ಕೋಟಿ ರೂ. ಹಾಗೂ ರಾಜ್ಯ ಸರಕಾರದ ಯೋಜನೆಯಡಿ ಪ್ರತಿ ತಿಂಗಳಿಗೆ 300 ರೂ.ಗಳಂತೆ 24 ತಿಂಗಳ ಅವಧಿಗೆ 60.84 ಲಕ್ಷ ರೂ.ಅನುದಾನವನ್ನು ಜೀತ ವಿಮುಕ್ತರಿಗೆ ಕಲ್ಪಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
  ಅದೇ ರೀತಿ ಯಾದಗಿರಿಯ ಒಂದು ಪ್ರಕರಣದಲ್ಲಿ ಕೇಂದ್ರ ಸರಕಾರದಿಂದ 20 ಸಾವಿರ ರೂ.ಹಾಗೂ ರಾಜ್ಯ ಸರಕಾರದಿಂದ 7200 ರೂ., ಮೈಸೂರು ಜಿಲ್ಲೆಯ 253 ಪ್ರಕರಣಗಳಲ್ಲಿ 18.21 ಲಕ್ಷ ರೂ.ಗಳನ್ನು ರಾಜ್ಯ ಸರಕಾರ ನೀಡಿದೆ. ಇನ್ನುಳಿದಂತೆ ಮೈಸೂರಿನ 122 ಹಾಗೂ ಉಡುಪಿ ಜಿಲ್ಲೆಯ 8 ಪ್ರಕರಣಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಒಳಗೊಂಡ ಪ್ರಸ್ತಾವನೆಯನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಲು ಜಿಲ್ಲಾ ಪಂಚಾಯತ್‌ಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತುಮಕೂರು ಜಿಲ್ಲೆಯ 119 ಹಾಗೂ 386, ಮೈಸೂರು ಜಿಲ್ಲೆಯ 253 ಸೇರಿದಂತೆ ಒಟ್ಟು 758 ಜೀತ ವಿಮುಕ್ತರಿಗೆ ಕೇಂದ್ರ ಸರಕಾರದಿಂದ 75.80 ಲಕ್ಷ ರೂ.ಗಳ ಅನುದಾನವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News