×
Ad

ಎ.12ಕ್ಕೆ ಮರುಪರೀಕ್ಷೆ

Update: 2016-03-31 23:59 IST

40 ಅಧಿಕಾರಿಗಳ ಅಮಾನತು

ಸದನದಲ್ಲಿ ಗದ್ದಲ ಸಚಿವ ಕಿಮ್ಮನೆ ರಾಜೀನಾಮೆಗೆ ವಿಪಕ್ಷಗಳ ಪಟ್ಟು

ಹಲವೆಡೆ ವಿದ್ಯಾರ್ಥಿ, ಪೋಷಕರಿಂದ ಪ್ರತಿಭಟನೆ

ಬೆಂಗಳೂರು, ಮಾ.31: ದ್ವಿತೀಯ ಪಿಯುಸಿ ಪರೀಕ್ಷೆಯ ರಸಾಯನಶಾಸ್ತ್ರದ ಹೊಸ ಪಠ್ಯಕ್ರಮದ ಪ್ರಶ್ನೆಪತ್ರಿಕೆ ಎರಡನೆ ಬಾರಿ ಸೋರಿಕೆಯಾದ ಹಿನ್ನೆಲೆಯಲ್ಲಿ ಗುರುವಾರ (ಮಾ.31) ನಡೆಯಲಿದ್ದ ಈ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಎ.12ರಂದು ಮರು ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ತನ್ನ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳ ಸದಸ್ಯರ ಧರಣಿ, ಗದ್ದಲದ ನಡುವೆಯೇ ಉತ್ತರ ನೀಡಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ ಪದವಿ ಪೂರ್ವ ಪರೀಕ್ಷಾ ವಿಭಾಗದ 40 ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ತಕ್ಷಣವೇ ಅಮಾನತು ಮಾಡಲಾಗಿದೆ ಎಂದರು.

ವೀಕ್ಷಕರ ತಂಡ: ಎ.12ರಂದು ಎರಡನೆ ಬಾರಿಗೆ ನಡೆಯುತ್ತಿರುವ ರಸಾಯನ ಶಾಸ್ತ್ರ ವಿಷಯದ ಮರು ಪರೀಕ್ಷೆಯ ಉಸ್ತುವಾರಿಗಾಗಿ ಸರ್ವ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕ ಡಾ.ಪಿ.ಸಿ.ಜಾಫರ್ ನೇತೃತ್ವದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಹಿಂದಿನ ನಿರ್ದೇಶಕ ಹಾಗೂ ಪ್ರಸ್ತುತ ಸಾರಿಗೆ ಆಯುಕ್ತ ರಾಮೇಗೌಡ ಅವರನ್ನು ಒಳಗೊಂಡಂತೆ ಮೂವರು ಹಿರಿಯ ಅಧಿಕಾರಿಗಳ ವೀಕ್ಷಕರ ತಂಡವನ್ನು ರಚಿಸಲಾಗುವುದು ಎಂದು ಕಿಮ್ಮನೆ ರತ್ನಾಕರ ಪ್ರಕಟಿಸಿದರು.

ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಲು, ಸೋರಿಕೆಯ ಮೂಲ ಹಾಗೂ ತಪ್ಪಿತಸ್ಥರನ್ನು ಗುರುತಿಸಲು ಸಿಐಡಿಗೆ ಸೂಚಿಸಲಾಗಿದೆ. ತಪ್ಪಿತಸ್ಥರನ್ನು ಪತ್ತೆ ಮಾಡಿದ ಬಳಿಕ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಕಿಮ್ಮನೆ ರತ್ನಾಕರ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News