ದ್ವಿಚಕ್ರ ವಾಹನ ಕಳವು ಪ್ರಕರಣ: ಮೂವರ ಸೆರೆ, 39 ಬೈಕ್‌ಗಳ ವಶ
ಕಡೂರು, ಎ. 1: ಕಡೂರು ಪಟ್ಟಣದಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಪ್ರತ್ಯೇಕ ಪ್ರಕರಣಗಳಡಿ ಬಂಧಿಸಲಾಗಿದೆ ಎಂದು ಕಡೂರು ವೃತ್ತ ನಿರೀಕ್ಷಕ ಸಿ. ಮಧುಸೂದನ್ ತಿಳಿಸಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿಗಳನ್ನು ತಿಪಟೂರು ತಾಲೂಕಿನ ಹಾಲಕುರಿಕೆ ಮೂಲದ ಯೋಗೀಶ್ ಮತ್ತು ಹಾಸನ ಜಿಲ್ಲೆಯ ಹರಳಕಟ್ಟ ಗ್ರಾಮದ ವಿನಯ್ ಮತ್ತು ಪ್ರಶಾಂತ್ ದುದ್ದಾ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನ ಮತ್ತು ಮನೆಗಳ್ಳತನದ ಸರಣಿ ಪ್ರಕರಣಗಳು ಹೆಚ್ಚಿದ್ದ ಹಿನ್ನ್ನೆಲೆಯಲ್ಲಿ ಎರಡು ತಂಡಗಳನ್ನು ರಚಿಸಿ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಗಳಿಂದ ಒಟ್ಟು 39 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ತಂಡದಲ್ಲಿ ತರೀಕೆರೆ ಉಪವಿಭಾಗದ ಉಪ ಅಧೀಕ್ಷಕ ರಾಜನ್ ವೈ.ನಾಯ್ಕ್ಕ ಮಾರ್ಗದರ್ಶನದಂತೆ ಕಡೂರು ಪಿಎಸ್ಸೈ ರಾಮಚಂದ್ರ ನಾಯ್ಕ ನೇತೃತ್ವದಲ್ಲಿ ಹಾಗೂ ಅಪರಾಧ ವಿಭಾಗದ ಪಿಎಸ್‌ವೈ ಇ. ಲೋಕೇಶ್ ನೇತೃತ್ವದಲ್ಲಿ 2 ತಂಡಗಳನ್ನಾಗಿ ರಚಿಸಲಾಗಿತ್ತು. ರಾಮಚಂದ್ರನಾಯ್ಕಾ ನೇತೃತ್ವದ ತಂಡವು ಕಡೂರು ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಆರೋಪಿ ತಿಪಟೂರು ತಾಲೂಕಿನ ಹಾಲಕುರಿಕೆ ಮೂಲದ ಯೋಗೀಶ್‌ನನ್ನು ಮಾ.31ರ ರಾತ್ರಿ ಬಂಧಿಸುವ ಮೂಲಕ ಆರೋಪಿಯಿಂದ 16 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಪಿಎಸ್‌ವೈ ಲೋಕೇಶ್ ತಂಡದವರು ಬಾಣಾವರದ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಇಬ್ಬರು ಆರೋಪಿಗಳಾದ ಹಾಸನ ಜಿಲ್ಲೆಯ ಹರಳಕಟ್ಟ ಗ್ರಾಮದ ವಿನಯ್ ಮತ್ತು ಪ್ರಶಾಂತ್ ದುದ್ದಾ ಹೋಬಳಿಯ ಗಾಡೇನಹಳ್ಳಿ ಗ್ರಾಮದ ಇವರನ್ನು ಬಂಧಿಸಿ ಏಳು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು 6 ಬೈಕ್‌ಗಳನ್ನು ಹಾಸನ ನಗರ ಮತ್ತು 16 ಬೈಕ್‌ಗಳನ್ನು ಬೆಂಗಳೂರಿನ ಹೆಬ್ಬೋಡಿ ಹಾಗೂ ಪಂಚನಹಳ್ಳಿಯಲ್ಲಿ 1 ಬೈಕ್‌ಗಳ ಸಹಿತ ಒಟ್ಟು 23 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡಿರುವ ಬೈಕ್‌ಗಳ ಒಟ್ಟು ವೌಲ್ಯ ಸುಮಾರು 12 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇದೇ ಪ್ರಕರಣವನ್ನು ಚುರುಕುಗೊಳಿಸಿ ಉಳಿದ ಹಲವು ಆರೋಪಿಗಳನ್ನು ದಸ್ತಗಿರಿ ಮಾಡುವುದಾಗಿ ಭರವಸೆ ನೀಡಿದರು.
ಠಾಣಾಧಿಕಾರಿ ರಾಮಚಂದ್ರ ನಾಯ್ಕ ತಂಡದಲ್ಲಿ ಸಿಬ್ಬಂದಿ ಮಂಜಪ್ಪ, ಶಿವುಕುಮಾರ್, ಕೃಷ್ಣಮೂರ್ತಿ, ನರೇಂದ್ರ, ಲೋಹಿತ್, ಆನಂದ್‌ನಾಯ್ಕ ಹಾಗೂ ಪಿಎಸ್‌ಐ ಲೋಕೇಶ್ ತಂಡದಲ್ಲಿ ಸಿಬ್ಬಂದಿ ಮಲ್ಲಪ್ಪ, ಮಧುಕುಮಾರ್, ಚಿದಾನಂದ್ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಈ ಎರಡು ತಂಡಗಳ ಯಶಸ್ವಿ ಕಾರ್ಯಾಚರಣೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‌ಬಾಬು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.