ಆಪ್ ಕಾರ್ಯಕರ್ತರಿಂದ ಸಿಎಂ ಪ್ರತಿಕೃತಿ ದಹನ

Update: 2016-04-01 16:37 GMT

ಚಿಕ್ಕಮಗಳೂರು, ಎ.1: ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ಎಸಿಬಿಯನ್ನು ಹಿಂಪಡೆಯಲು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಪ್ರತಿಕೃತಿಯನ್ನು ದಹನ ಮಾಡುವ ಮೂಲಕ ಹಾಗೂ ಮಾನವ ಸರಪಳಿ ನಿರ್ಮಿಸುವ ಮೂಲಕ ಆಪ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾ ಕಾಯದರ್ಶಿ ಎಚ್.ಮೋಹನ್ ಮಾತನಾಡಿ, ಎಸಿಬಿ ವಿರುದ್ಧ ಪಕ್ಷವು ಹೋರಾಟವನ್ನು ತೀವ್ರಗೊಳಿಸಿದೆ. ಬೆಂಗಳೂರಿನಲ್ಲಿ ಕೇಶಮುಂಡನ ಮಾಡಿಕೊಂಡು ಕೂದಲನ್ನು ಮುಖ್ಯಮಂತ್ರಿಯವರಿಗೆ ರವಾನಿಸುವ ಮೂಲಕ ಪ್ರತಿಭಟಿಸಲಾಗಿದೆ. ಫ್ರೀಡಂ ಪಾರ್ಕ್‌ನ ಗಾಂಧಿ ವೃತ್ತದ ಬಳಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮಾಡುವ ಮೂಲಕ ಎಸಿಬಿಯನ್ನು ಹಿಂಪಡೆಯಬೇಕೆಂದು ರವಿಕೃಷ್ಣರೆಡ್ಡಿಯವರ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

 ಮುಖ್ಯಮಂತ್ರಿ ಭ್ರಷ್ಟಾಚಾರಗಳಿಗೆ ಕುಮ್ಮಕ್ಕು ನೀಡುವಂತಹ ಎಸಿಬಿ ರಚನೆ ಮಾಡಿದೆ. ಇದರಡಿ ಮೊಕದ್ದಮೆ ದಾಖಲು ಮಾಡಿಕೊಳ್ಳಲು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕಾಗುತ್ತದೆ. ಪೊಲೀಸರು ಮೇಲಾಧಿಕಾರಿಗಳ ಅಥವಾ ರಾಜಕಾರಣಿಗಳ ಪ್ರಭಾವಕ್ಕೆ ಮೊಕದ್ದಮೆ ದಾಖಲಿಸದೇ ಇರಬಹುದು. ಇದೆಲ್ಲದರ ಲಾಭ ಪಡೆಯಲು ಎಸಿಬಿಯನ್ನು ರಚಿಸಲಾಗಿದೆ ಎಂದು ಆರೋಪಿಸಿದ ಅವರು, ಎಸಿಬಿಯನ್ನು ಹಿಂಪಡೆಯುವ ತನಕ ಆಪ್ ಪ್ರತಿಭಟನೆಯನ್ನು ಮುಂದುವರಿಸುತ್ತದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಪಕ್ಷದ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಚಿಕ್ಕಮಗಳೂರಿನಿಂದ ಸುಮಾರು 100 ಜನ ಕಾರ್ಯಕರ್ತರು ತೆರಳಿದ್ದು, ಎ.2ರಂದು ಬೆಂಗಳೂರಿನಲ್ಲಿ ಎಸಿಬಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಮೋಹನ್ ತಿಳಿಸಿದ್ದಾರೆ.

ಈ ಸಂದಭರ್ದಲ್ಲಿ ಮುಖಂಡರಾದ ಯಶವಂತ್, ಅವಿನಾಶ್, ಅಂತೋಣಿ, ಪೃಥ್ವಿ, ಬದಿಯಾ ನಾಯಕ್, ಎ.ಸಿ.ಹರೀಶ್ ಹಾಸನ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News