ಅಧಿಕಾರಿಗಳ ಅಮಾನತು: ಜಿಲ್ಲಾಧಿಕಾರಿ ಕ್ರಮವನ್ನು ವಿರೋಧಿಸಿ ಧರಣಿ
ಸೊರಬ,ಎ.1: ಜಿಲ್ಲಾಧಿಕಾರಿಗಳು ಹಾಗೂ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕುಡಿಯುವ ನೀರು ನಿರ್ವಹಣೆ ವಿಷಯವಾಗಿ ಕರೆದಿದ್ದ ತುರ್ತು ಸಭೆಗೆ ಸಕಾಲಕ್ಕೆ ಹಾಜರಾಗದ ನಾಲ್ಕು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿರುವ ಜಿಲ್ಲಾಧಿಕಾರಿಗಳ ಕ್ರಮವನ್ನು ವಿರೋಧಿಸಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಸಂಘದ ವತಿಯಿಂದ ಪಟ್ಟಣದ ತಾಪಂ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ನೇತೃತ್ವ ವಹಿಸಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಸಂಘದ ತಾಲೂಕು ಅಧ್ಯಕ್ಷ ನೀಲಪ್ಪ ಭೂತಣ್ಣನವರ್ ಮಾತನಾಡಿ, ಮಾ.31ರ ಗುರುವಾರ ಪಟ್ಟಣದಲ್ಲಿ ಕರೆದಿದ್ದ ತುರ್ತು ಸಭೆಗೆ ಹಲವು ಕಾರ್ಯಕ್ರಮಗಳ ಅನುಷ್ಠಾನ ಮಾಡುವಲ್ಲಿ ನಿರತರಾಗಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಸಭೆೆಗೆ ಹಾಜರಾಗಿರುತ್ತಾರೆ. ಆದರೆ, ಮಾಹಿತಿ ಹಾಗೂ ಸಂವಹನದ ಕೊರತೆಯಿಂದಾಗಿ ಶಿಗ್ಗಾ, ಗೆಂಡ್ಲಾ, ಹಂಚಿ ಹಾಗೂ ಶಕುನವಳ್ಳಿಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಸಭೆೆಗೆ ಸಕಾಲಕ್ಕೆ ಹಾಜರಾಗದೆ, ಅಂದು ಗ್ರಾಪಂ ಕಾರ್ಯನಿರ್ವಹಿಸಿರುತ್ತಾರೆ. ಆ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಖಂಡನೀಯ ಎಂದರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಸಂಘದ ತಾಲೂಕು ಉಪಾಧ್ಯಕ್ಷ ಪರಮೇಶ್ ಮಾತನಾಡಿ, ಆರ್ಥಿಕ ವರ್ಷದ ಕೊನೆಯಾಗಿರುವುದರಿಂದ ಕೆಲಸಗಳ ಒತ್ತಡವು ಅತಿಯಾಗಿರುತ್ತದೆ. ಅಲ್ಲದೆ ಅತಿ ಜರೂರಾಗಿ ಆರ್ಥಿಕ ಮತ್ತು ಭೌತಿಕವಾಗಿ ಪೂರ್ಣಗೊಂಡ ಕಾಮಗಾರಿಗಳಿಗೆ ಕಾಮಗಾರಿ ಮುಕ್ತಾಯ ದಿನಾಂಕವನ್ನು ನಮೂದಿಸಬೇಕಾಗುತ್ತದೆ. ಗ್ರಾಮಸಭೆ, ವಾರ್ಡ್ ಸಭೆ ಬುಕ್‌ಲೆಟ್‌ಗಳ ಜಿಪಿಎಸ್ ಮಾಡಿ ತಂತ್ರಾಂಶದಲ್ಲಿ ಅಳವಡಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡುವುದು ಅನಿವಾರ್ಯವಾಗಿರುತ್ತದೆ ಎಂದರು. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಹಾಗೂ ಇಂಟರ್‌ನೆಟ್‌ನ ಸಮಸ್ಯೆಯೂ ಸಹ ಇರುವುದರಿಂದ ಹಲವರು ತಾಲೂಕಿನ ಗಡಿ ಪ್ರದೇಶದಿಂದ ಕೇಂದ್ರ ಸ್ಥಾನಕ್ಕೆ ಬರಲು ಸಮಯಾವಕಾಶವು ಸಹ ಬೇಕಾಗುತ್ತದೆ. ಇದೆಲ್ಲದರ ನಡುವೆ ಬಹುತೇಕ ಮಂದಿ ಸಭೆಗೆ ಹಾಜರಾಗಿದ್ದು, ಕೆಲವರು ಮಾತ್ರ ಸಭೆಗೆ ಸಕಾಲಕ್ಕೆ ಹಾಜರಾಗಲು ವಿಳಂಬವಾಗಿದೆ ಎಂದರು. ಸಭೆೆಗೆ ಸಕಾಲಕ್ಕೆ ಹಾಜರಾಗದೇ ಇರುವುದನ್ನು ಕಾರಣವನ್ನಾಗಿಸಿಕೊಂಡು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದನ್ನು ವಾಪಸ್ ಪಡೆದು, ಅನೇಕ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಮನಸ್ಥೈರ್ಯ ತುಂಬಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಹಾಗೂ ಸಾಮೂಹಿಕ ರಾಜೀನಾಮೆ ನೀಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಪ್ರತಿಭಟನೆಯಲ್ಲಿ ಶ್ರೀರಾಮ್, ಹೋಮೇಶಪ್ಪ, ನರೇಂದ್ರ, ಸೀಮಾ, ಕಾಳಿಂಗರಾಜ, ನಾಗರಾಜ, ಸುಭಾಷ್, ಮಂಜಪ್ಪ, ನವೀನ, ರಾಜು, ಭುಜಂಗಪ್ಪ, ಶಕುನವಳ್ಳಿ ಗ್ರಾಪಂ ಅಧ್ಯಕ್ಷೆ ಸುನಿತಾ ನಿಂಗಪ್ಪ, ಉಪಾಧ್ಯಕ್ಷ ಮಹೇಶ, ಸಾಗರ, ಸೊರಬ, ಶಿಕಾರಿಪುರ ಗ್ರಾಪಂ ಪಿಡಿಒ ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.