ಶಿಕ್ಷಣ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಯಾಗಿಲ್ಲ: ಡಾ.ನಿರಂಜನಾರಾಧ್ಯ
ಬೆಂಗಳೂರು, ಎ.1: ಕೇಂದ್ರ ಸರಕಾರ ಜಾರಿಗೆ ತಂದಿರುವ ಶಿಕ್ಷಣ ಹಕ್ಕು ಕಾಯ್ದೆ ಕರ್ನಾಟಕದಲ್ಲಿ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಆಪಾದಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆ ತರುವ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದ ಮೇಲೂ ಮಧುಗಿರಿಯಲ್ಲಿ 17 ಮಕ್ಕಳು, ತೀರ್ಥಹಳ್ಳಿ 10 ಮಕ್ಕಳು, ಬಾಗಲಕೋಟೆಯಲ್ಲಿ 24 ಮಕ್ಕಳು ಸೇರಿ ರಾಜ್ಯದಲ್ಲಿ ಒಟ್ಟು 9 ಸಾವಿರ ಮಕ್ಕಳು ಶಾಲೆಯನ್ನು ಬಿಟ್ಟಿದ್ದಾರೆ. ಆದರೆ, ಸರಕಾರ ಈವರೆಗೂ ಈ ಮಕ್ಕಳನ್ನು ಶಾಲೆಗೆ ವಾಪಸ್ ಕರೆ ತರುವ ಕೆಲಸವನ್ನು ಮಾಡಿಲ್ಲ ಎಂದು ಆಪಾದಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಇನ್ನಿತರ ಮಹಾನ್ ಸಾಧಕರು 1960ರ ಹೊತ್ತಿಗೆ ಎಲ್ಲ ಮಕ್ಕಳಿಗೂ ಶಿಕ್ಷಣ ಸಿಗಬೇಕೆಂದು ಆಶಿಸಿದ್ದರು. ಆದರೆ, ಇಲ್ಲಿಯವರೆಗೆ ಆ ಕನಸು ನನಸಾಗಲಿಲ್ಲ. ಆದರೆ, ಇನ್ನು ಮುಂದೆಯಾದರೂ ಸರಕಾರ, ಎನ್‌ಜಿಓ ಹಾಗೂ ಇತರರ ಸಹಕಾರದಿಂದ ಚಳವಳಿಗಳನ್ನು ರೂಪಿಸಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರೋಣ ಎಂದು ಕರೆ ನೀಡಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ದೇಶ ಅಭಿವೃದ್ಧಿ ಹೊಂದಬೇಕಾದರೆ ಆ ದೇಶದಲ್ಲಿ ಶಿಕ್ಷಿತರೂ ಇರಬೇಕಾಗುತ್ತದೆ. ಈಗ ನಮ್ಮ ದೇಶದಲ್ಲಿ ಶೇ.78ರಷ್ಟು ಶಿಕ್ಷಿತರಿದ್ದು, ದೇಶ ಅಭಿವೃದ್ಧಿ ಪಥದ ಕಡೆಗೆ ಹೊಗುತ್ತಿದೆ ಹಾಗೂ ಶಿಕ್ಷಿತರಿಗೆ ಉದ್ಯೋಗ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಫ್ರಾನ್ಸ್ ದೇಶದಲ್ಲಿ ತಂದೆ ತಾಯಿಗಳು ಮಕ್ಕಳನ್ನು ಶಾಲೆಗಳಿಗೆ ಕಳುಹಿಸದಿದ್ದರೆ ಅವರಿಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದ ಅವರು, ಶಿಕ್ಷಣಕ್ಕೆ ಎಷ್ಟು ಮಹತ್ವವಿದೆ ಎಂಬುದನ್ನು ಫ್ರಾನ್ಸ್ ದೇಶವೇ ನಮಗೊಂದು ಉದಾಹರಣೆಯಾಗಿದೆ. ಹೀಗಾಗಿಯೆ ಇಂತಹ ಇನ್ನಷ್ಟು ಕಾನೂನುಗಳನ್ನು ಜಾರಿಗೆ ತರುವ ಅವಶ್ಯಕತೆ ಇದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಉಮಾಶ್ರೀ ಮಾತನಾಡಿ, ಮಕ್ಕಳು ಶಾಲೆಗಳ ಕಡೆಗೆ ಮುಖ ಮಾಡಲು ಚಿಣ್ಣರ ಅಂಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ಅವರನ್ನು ಕರೆ ತರಬೇಕೆಂದು ಹೇಳಿದರು.
ಕೃಪಾ ಆಳ್ವ ಅವರು ರಾಜ್ಯದ 17 ಜಿಲ್ಲೆಗಳಿಗೆ ತೆರಳಿ ಮಕ್ಕಳನ್ನು ರಕ್ಷಿಸುವ ಹಾಗೂ ಶಾಲೆಗಳಿಗೆ ವಾಪಸ್ ಕರೆ ತರುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಮಾತನಾಡಿ, ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆತರೆ ರಾಜ್ಯದಲ್ಲಿ ಕಾನೂನು ವಿರುದ್ಧವಾಗಿ ನಡೆಯುವ ಬಾಲ್ಯ ವಿವಾಹಗಳು ಕಡಿಮೆಯಾಗುತ್ತವೆ ಎಂದು ಆಶಯ ವ್ಯಕ್ತಪಡಿಸಿದರು. ಮಕ್ಕಳಿಗೆ ಶಿಕ್ಷಣ ಸಿಗದ ಹಿನ್ನೆಲೆಯಲ್ಲಿ ಬೀದಿ ಬದಿಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚಾಗಿದೆ. ಭಿಕ್ಷಾಟನೆಯನ್ನು ತಡೆಗಟ್ಟಲು ಎಲ್ಲ ಮಕ್ಕಳಿಗೂ ಶಿಕ್ಷಣವನ್ನು ಕಲ್ಪಿಸುವ ಅವಶ್ಯಕತೆ ಇದೆ. ಅಲ್ಲದೆ, ದೇಶದ ಜನಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಾರ್ತಾ ಸಚಿವ ಆರ್.ರೋಷನ್ ಬೇಗ್ ಮತ್ತಿತರರು ಉಪಸ್ಥಿತರಿದ್ದರು.
‘ಸಮಾಜದಲ್ಲಿನ ಹಲವಾರು ಸಮುದಾಯಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಂತಹ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವತ್ತ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಬೇಕಿದೆ’
-ಡಾ.ಜಿ.ಪರಮೇಶ್ವರ್, ಗೃಹ ಸಚಿವರು.