ಬಿಎಂಟಿಸಿಗೆ 1 ಸಾವಿರ ಹೊಸ ಬಸ್‌ಗಳ ಖರೀದಿ: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು, ಎ. 1: ಉದ್ಯಾನ ನಗರಿ ಬೆಂಗಳೂರಿನ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಹೊಸದಾಗಿ 1 ಸಾವಿರ ಬಸ್‌ಗಳನ್ನು ಖರೀದಿಸಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಎಂಟಿಸಿಯಲ್ಲಿ ಈಗಾಗಲೇ 6,500 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು, 650 ಬಸ್ ಖರೀದಿಗೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದೀಗ ಹೊಸದಾಗಿ ಇನ್ನೂ 1 ಸಾವಿರ ಬಸ್‌ಗಳನ್ನು ಖರೀದಿಸಲಾಗುವುದು ಎಂದರು.
ಹೊಸ ಬಸ್‌ಗಳ ಖರೀದಿಗೆ ರಾಜ್ಯ ಸರಕಾರ 50 ಕೋಟಿ ರೂ.ಬಡ್ಡಿ ಮೊತ್ತವನ್ನು ಭರಿಸಲಿದ್ದು, ನಿಗಮದಿಂದ ಬಸ್ ಖರೀದಿಗೆ ಹಣ ನೀಡಲಾಗುವುದು ಎಂದ ಅವರು, ಮೂರು ತಿಂಗಳ ಒಳಗಾಗಿ ಈ ಹೊಸ ಬಸ್‌ಗಳು ಬಿಎಂಟಿಸಿ ಪ್ರಯಾಣಿಕರಿಗೆ ಲಭ್ಯವಾಗಲಿವೆ ಎಂದು ಹೇಳಿದರು.
ಸುಮಾರು 9ಲಕ್ಷ ಕಿ.ಮೀ.ಕ್ರಮಿಸಿದ ವಾಹನ ಗಳನ್ನು ಗುಜರಿಗೆ ಕಳುಹಿಸಲಾಗುವುದು ಎಂದ ಅವರು, ಒಟ್ಟಾರೆ ವಾಹನಗಳ ಪೈಕಿ ಶೇ.10ರಷ್ಟು ಬಸ್‌ಗಳುದುರಸ್ತಿಗೆ ಬರಲಿದ್ದು, ಅವುಗಳ ಸ್ಥಾನಕ್ಕೆ ಹೊಸ ಬಸ್ಸುಗಳನ್ನು ಖರೀದಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಕೆಎಸ್ಸಾರ್ಟಿಸಿ, ಈಶಾನ್ಯ ಸಾರಿಗೆ ಸೇರಿದಂತೆ ನಾಲ್ಕು ನಿಗಮಗಳಿಗೆ ಒಟ್ಟು ನಾಲ್ಕು ಸಾವಿರ ಹೊಸ ಬಸ್ಸುಗಳನ್ನು ಕೈಬಿಡಲಾಗುವುದು ಎಂದ ಅವರು, 2010ರಿಂದ ಖಾಸಗಿ ವಾಹನಗಳ ಮೇಲಿನ ತೆರಿಗೆ ಹೆಚ್ಚಳ ಮಾಡಿರಲಿಲ್ಲ. ಇದೀಗ ಸಂಪನ್ಮೂಲ ಕ್ರೋಢೀಕರಣ ದೃಷ್ಟಿಯಿಂದ ತೆರಿಗೆ ವಿಧಿಸಲಾಗಿದೆ. ಒಟ್ಟು 120 ಕೋಟಿ ರೂ.ಆದಾಯ ಸರಕಾರಕ್ಕೆ ಬರಲಿದೆ ಎಂದರು.
ಕ್ರಿಮಿನಲ್ ಕೇಸ್: ಕಳಪೆ ಬಸ್ಸುಗಳನ್ನು ಬಿಎಂಟಿಸಿಗೆ ಪೂರೈಕೆ ಮಾಡಿದ ಟಾಟಾ ಮಾರ್ಕೋ ಪೋಲೋ ಕಂಪೆನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಸೂಚಿಸಲಾಗಿದೆ ಎಂದ ಅವರು, ಖರೀದಿಗೆ ಅವ್ಯವಹಾರದಲ್ಲಿನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.