ಸೋನಿಯಾಗಾಂಧಿಗೆ ಪತ್ರ ಬರೆದ ಎಸ್.ಆರ್.ಹಿರೇಮಠ್
ಬೆಂಗಳೂರು, ಎ.1: ಲೋಕಾಯುಕ್ತವನ್ನು ಬಲಗೊಳಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ವಾಪಸ್ ಪಡೆದು ಲೋಕಾಯುಕ್ತಕ್ಕೆ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್‌ರನ್ನು ನೇಮಕ ಮಾಡಬೇಕು ಎಂದು ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಎಸ್.ಆರ್.ಹಿರೇಮಠ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿಗೆ ಮಾ.21 ರಂದು ಪತ್ರವನ್ನು ಬರೆಯಲಾಗಿದ್ದು, ಅದರಲ್ಲಿ ‘ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಈಗ ಗಂಭೀರವಾದ ಸ್ಥಿತಿಗೆ ತಲುಪಿದೆ. ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಮುಖ್ಯಮಂತ್ರಿಗಳ ನಡವಳಿಕೆಯ ಮೇಲೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಹೈ ಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹಾಗಾಗಿ ಕೂಡಲೇ ಕಾಂಗ್ರೆಸ್ ಹೈ ಕಮಾಂಡ್ ಮಧ್ಯಪ್ರವೇಶ ಮಾಡಬೇಕು ಹಾಗೂ ಅಗತ್ಯ ಬಿದ್ದರೆ ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಮತ್ತು ಇನ್ನಿತರರನ್ನು ಬದಲಿಸಬೇಕು ಎಂದು ಒತ್ತಾಯಿಸಲಾಗಿದೆ’ ಎಂದು ಹೇಳಿದರು.
ಎಸಿಬಿಯನ್ನು ರಚಿಸುವುದರ ಮೂಲಕ ಸಾರ್ವಜನಿ ಕರು ಭ್ರಷ್ಟಾಚಾರದ ವಿರುದ್ಧ ಎಲ್ಲಿ ದೂರು ನೀಡಬೇಕು ಎಂದು ತಿಳಿಯದೇ ಅಥವಾ ಅವಕಾಶವೇ ಇಲ್ಲ ಎನ್ನುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕೆ ಕಾರಣರಾದ ಮುಖ್ಯಮಂತ್ರಿಯನ್ನು ಹಾಗೂ ಇನ್ನಿತರರನ್ನು ಹೊಣೆಗಾರರನ್ನಾಗಿ ಮಾಡಬೇಕು. ತಕ್ಷಣವೇ ಲೋಕಾಯುಕ್ತ ಪೊಲೀಸ್‌ರಿಗೆ ಮರಳಿ ಹಿಂದಿನ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದರು.
ಸರಕಾರದ ಹಿಂದಿನ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಆರ್.ವಿ.ದೇಶಪಾಂಡೆ, ಶೋಭಾ ಡೆವಲಪರ್ಸ್(ಡಿ.ಕೆ.ಶಿವಕುಮಾರ್), ಪ್ರೆಸ್ಟೀಜ್ ಡೆವಲಪರ್ಸ್ ಇವರುಗಳ ಮೇಲೆ ಅರಣ್ಯ ಭೂಮಿಯನ್ನು ಕಬಳಿಸಿರುವುದಕ್ಕಾಗಿ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2014 ಪ್ರಕಾರ ವಿಶೇಷ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.