×
Ad

ಸರಕಾರಿ ಶಾಲೆಗಳ ಆಯಾಗಳ ಖಾಯಮಾತಿಗೆ ಒತ್ತಾಯ

Update: 2016-04-01 23:31 IST

ಬೆಂಗಳೂರು, ಎ.1: ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯಾಗಳನ್ನು ಕೂಡಲೆ ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಇಂದು ಸ್ವಾತಂತ್ರ ಉದ್ಯಾನವನದಲ್ಲಿ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಆಯಾಗಳ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
 ಈ ವೇಳೆ ಮಾಧ್ಯಮಗಳೊಂದಿಗೆ ಸಂಘದ ಅಧ್ಯಕ್ಷೆ ಸುಶೀಲಾದೇವಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಕಳೆದ ಮೂವತ್ತು ವರ್ಷಗಳಿಂದ ಅತಿ ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವತ್ತಿನ ಅಗತ್ಯ ಬೆಲೆಗಳ ಏರಿಕೆಯಿಂದ ಆಯಾಗಳು ಜೀವನ ನಡೆಸಲು ದುಸ್ತರವಾಗಿದೆ ಎಂದು ಆಯಾಗಳು ದಿನ ನಿತ್ಯದ ಸಮಸ್ಯೆಗಳನ್ನು ತೆರೆದಿಟ್ಟರು.
ಕಳೆದ ಬಜೆಟ್‌ನಲ್ಲಿ ಆಯಾಗಳ ಸೇವೆ ಖಾಯಂ ಬಗ್ಗೆ ನಿಯಮಾವಳಿ ರೂಪಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಲಾಗಿತ್ತು. ಆದರೆ ಇದುವರೆಗೂ ಕಾರ್ಯ ರೂಪಕ್ಕೆ ತರುವಂತ ಪ್ರಯತ್ನವನ್ನು ಅಧಿಕಾರಿಗಳು ಮಾಡಿಲ್ಲ ಎಂದು ದೂಷಿಸಿದ ಅವರು, ಆಯಾಗಳ ಖಾಯಮಾತಿ ವಿಳಂಬವಾಗಲು ಶಿಕ್ಷಣ ಇಲಾಖೆಯ ಅಧಿಕಾರಿಗಳ ತಾತ್ಸಾರವೇ ಕಾರಣ ಎಂದು ಗಂಭೀರವಾಗಿ ಆರೋಪಿಸಿದರು.
ಕಳೆದ 2002ರಿಂದ ತಡೆಹಿಡಿದ ಬೇಸಿಗೆ ರಜಾ ಬಾಕಿ ವೇತನ ಕೆಲ ಜಿಲ್ಲೆಗಳಲ್ಲಿ ಮಾತ್ರ ಪಾವತಿಸಿದ್ದಾರೆ. ಇನ್ನುಳಿದ ಜಿಲ್ಲೆಗಳಿಗೆ ಇದುವರೆಗೂ ಬಾಕಿ ವೇತನವನ್ನು ಬಿಡುಗಡೆ ಮಾಡಿಲ್ಲ ಈ ಪರಿಣಾಮ ಆಯಾಗಳ ಜೀವನ ಹೇಳ ತೀರದಂತಾಗಿದೆ. ಈ ಬಗ್ಗೆ ಸರಕಾರಕ್ಕೆ ಹಲವಾರು ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ನೋವಿನಿಂದ ನುಡಿದರು.
ಕಾರ್ಮಿಕರ ಕಾಯಿದೆಯಡಿ ದಿನಗೂಲಿಗಳೆಂದು ಆಯಾಗಳ ಕೆಲಸವನ್ನು ಖಾಯಂಗೊಳಿಸಬೇಕು. 2002ರಿಂದ ತಡೆಹಿಡಿದಿರುವ ಬೇಸಿಗೆ ರಜೆ ಬಾಕಿ ವೇತನವನ್ನು ಕೂಡಲೆ ಬಿಡುಗಡೆಗೊಳಿಸಬೇಕು. ಆಯಾಗಳ ನಿವೃತ್ತಿ ವೇತನ ಐದು ಸಾವಿರಕ್ಕೆ ಹೆಚ್ಚಿಸಬೇಕು. ವಯೋವೃದ್ಧ ಆಯಾಗಳಿಗೆ ನಿವೃತ್ತಿ ವೇತನಕೊಟ್ಟು ರೂ.3 ಲಕ್ಷ ಪರಿಹಾರ ನೀಡಬೇಕು ಎಂದು ಬೇಡಿಕೆಗಳನ್ನುಯಿಟ್ಟರು.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ ಕುಮಾರ್, ಜಯಶ್ರೀ, ಎಸ್.ಧನಂಜಯ್ ಸೇರಿದಂತೆ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News