×
Ad

ಹಾಸನ: ಜಾತ್ರೋತ್ಸವದಲ್ಲಿ ದಲಿತರಿಗೆ ಬಹಿಷ್ಕಾರ

Update: 2016-04-01 23:57 IST

ಪೊಲೀಸ್, ಪತ್ರಕರ್ತರ ಮೇಲೆ ಹಲ್ಲೆ

ಹೊಳೆನರಸೀಪುರ, ಎ.1: ತಾಲೂಕಿನ ಸಿಗರನಹಳ್ಳಿಯ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ದಲಿತರು ಭಾಗವಹಿಸಲು ನಿರಾಕಣೆಯ ಬಗ್ಗೆ ಸುದ್ದಿಮಾಡಲು ತೆರಳಿದ್ದ ವರದಿಗಾರರು ಹಾಗೂ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಅಮಾನವಿಯ ಘಟನೆ ಶುಕ್ರವಾರ ನಡೆದಿದೆ.

ದಲಿತರಿಗೆ ಗ್ರಾಮದ ದೇವಸ್ಥಾನಕ್ಕೆ ಪ್ರವೇಶ ನೀಡಲು ನಿರಾಕರಿಸಿದ ಕೆಲ ಗ್ರಾಮಸ್ಥರು ಕಾನೂನು ಕೈಗೆತ್ತಿಕೊಂಡಿದ್ದು, ಇದ್ದಕ್ಕಿದ್ದಂತೆಯೇ ಆರಂಭಗೊಂಡ ಘರ್ಷಣೆಯಲ್ಲಿ ಪತ್ರಕರ್ತರು, ಪೊಲೀಸರು ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಲಾಗಿದ್ದು, ಕಿಡಿಗೇಡಿಗಳನ್ನು ನಿಯಂತ್ರಿಸಲು ಲಾಠಿ ಚಾರ್ಜ್ ನಡೆಸಲಾಯಿತು.

ಆರೋಪಿಗಳು ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೂ ಹಲ್ಲೆ ನಡೆಸಲು ಮುಂದಾಗಿದ್ದು, ಪತ್ರಕರ್ತರಾದ ಡಿ.ಕೆ ವಸಂತಯ್ಯ ಹಾಗೂ ಕೃಷ್ಣ ಎಂಬವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಕ್ಯಾಮರಾ ಹಾಗೂ ಮೊಬೈಲ್‌ಗಳನ್ನು ಧ್ವಂಸಗೊಳಿಸಿ ಪತ್ರಕರ್ತರ ಬೈಕ್‌ನ್ನು ಜಖಂಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೊಳೆನರಸೀಪುರದ ಸಿಗರನಹಳ್ಳಿ ಗ್ರಾಮದಲ್ಲಿರುವ ಬಸವೇಶ್ವರ ಸ್ವಾಮಿ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ದಲಿತರು ಹಾಗೂ ಸವರ್ಣೀಯರ ನಡುವೆ ಅನೇಕ ಅಹಿತಕರ ಘಟನೆಗಳು ನಡೆದಿದ್ದು, ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಸಂಧಾನ ನಡೆಸಿತ್ತು. ಕಳೆದ ವರ್ಷ ಗ್ರಾಮದ ದಲಿತ ಮಹಿಳೆಯೊಬ್ಬರು ದೇವಸ್ಥಾನ ಪ್ರವೇಶ ಮಾಡಿದರು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ದೇವಾಸ್ಥಾನಕ್ಕೆ ಗ್ರಾಮಸ್ಥರು ಬೀಗ ಜಡಿದಿದ್ದರು. ಅಧಿಕಾರಿಗಳು, ಜನಪ್ರತಿನಿಧಿಗಳು, ಪ್ರಗತಿಪರರು ಹಾಗೂ ದಲಿತ ಮುಖಂಡರು ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡಿದ್ದರಾದರೂ ಯಾವುದೇ ಪ್ರಯೋಜನ ಆಗಿರಲ್ಲಿಲ್ಲ.

ಮೇಲ್ವರ್ಗ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದ ಕಾರಣ ಕಳೆದ ಆರು ತಿಂಗಳಿನಿಂದ ದೇವಸ್ಥಾನಕ್ಕೆ ಬೀಗ ಜಡಿಯಲಾಗಿದೆ. ಬೂದಿ ಮುಚ್ಚಿದ ಕೆಂಡಂತಿದ್ದ ಜನಾಂಗೀಯ ದ್ವೇಷ ಹೊತ್ತಿ ಉರಿದಿದೆ.

ಸಿಗರನಹಳ್ಳಿಯ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಜಾತ್ರಾ ಉತ್ಸವದಲ್ಲಿ ಪಾಲ್ಗೊಳ್ಳಲು ತಮಗೂ ಅವಕಾಶ ಮಾಡಿಕೊಡುವಂತೆ ಕೋರಿ ಸಿಗರನಹಳ್ಳಿಯ ದಲಿತ ಕುಟುಂಬಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದವು. ಈ ಹಿನ್ನ್ನೆಲೆಯಲ್ಲಿ ಗ್ರಾಮದ ಪೂಜೆ ಹಾಗು ಧಾರ್ಮಿಕ ಉತ್ಸವಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿತ್ತು. ಇದನ್ನು ಸಹಿಸದ ಕಿಡಿಗೇಡಿ ಜಾತಿವಾದಿಗಳು ಅಶಾಂತಿ ಸೃಷ್ಟಿಸಿದ್ದಾರೆ ಎನ್ನಲಾಗಿದೆ.

ದಲಿತರ ಪ್ರವೇಶಕ್ಕೆ ನಿರಾಕರಿಸಿದ ಗ್ರಾಮದ ಕೆಲ ಪ್ರಮುಖರು ತಮ್ಮ ಬಳಿ ಬಂದಿದ್ದ ಅಧಿಕಾರಿಗಳ ಮನವಿಯನ್ನು ತಿರಸ್ಕರಿಸಿದರು. ಶೋಷಣೆಗೆ ಅಂತ್ಯ ಹಾಡಿ ತಮಗೆ ದೇವಸ್ಥಾನ ಪ್ರವೇಶ ಮಾಡಲು ಅವಕಾಶ ಮಾಡಿಕೊಡಿ ಎಂದು ದಲಿತರು ಒತ್ತಾಯ ಮಾಡಿದರು. ಎರಡೂ ಕಡೆಗಳ ಮಾತುಕತೆಗೆ ಬಂದಿದ್ದ ಅಧಿಕಾರಿಗಳು ಒಂದು ಸ್ಪಷ್ಟವಾದ ನಿರ್ಣಯಕ್ಕೆ ಬರುವ ಮುನ್ನವೇ ಅಲ್ಲಿದ್ದ ಕೆಲ ಕಿಡಿಗೇಡಿಗಳು ಪತ್ರಕರ್ತರ ಮೇಲೆ ಮೇಲೆ ಹಲ್ಲೆ ನಡೆಸಿದ್ದಾರೆ ಎನಲಾಗಿದೆ.

ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಇಪ್ಪತ್ತಕ್ಕೂ ಅಧಿಕ ಗ್ರಾಮಸ್ಥರು ಗಾಯಗೊಂಡರು. ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಉಮೇಶ್ ಕುಸುಗಲ್, ಜಿಲ್ಲಾ ಉಪವಿಭಾಗಾಧಿಕಾರಿ ವಿಜಯಾ, ತಹಶೀಲ್ದಾರ್ ಮಂಜುನಾಥ್ ಹಾಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಸ್ವಯಂ ರಕ್ಷಣೆಗಾಗಿ ಸ್ಥಳೀಯ ಶಾಲಾ ಕಟ್ಟಡವನ್ನು ಸೇರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಸೆಕ್ಷನ್ ಜಾರಿ: ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್‌ವರ್ ಹೆಚ್ಚುವರಿ ಪಡೆಯೊಂದಿಗೆ ಗ್ರಾಮಕ್ಕೆ ಆಗಮಿಸಿ ಪರಿಸ್ಥಿತಿ ಹತೋಟಿಗೆ ತರುವ ಪ್ರಯತ್ನ ನಡೆಸಿದ್ದಾರೆ.

ಇದಕ್ಕೂ ಜಗ್ಗದೇ ಇದ್ದಾಗ ಲಘುಲಾಠಿ ಪ್ರಯೋಗ ನಡೆಸಿ ಗುಂಪನ್ನು ಚದುರಿಸಿದ್ದಾರೆ. ಗ್ರಾಮದಲ್ಲಿ ಈಗ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಘಟನೆಯಲ್ಲಿ ಗಾಯಗೊಂಡ ಪೊಲೀಸರು, ಪತ್ರಕರ್ತರು ಹಾಗೂ ಇತರರು ಹೊಳೆನರಸೀಪುರ ಮತ್ತು ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ದ ದೂರು ದಾಖಲಿಸಲಾಗಿದ್ದು, ಹಲವರು ಊರು ಬಿಟ್ಟಿದ್ದಾರೆ. ಸಧ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News