ಬುಡಕಟ್ಟು ಜನಾಂಗದ ಸಮಸ್ಯೆಗೆ ಪರಿಹಾರ: ಶಾಸಕ ಬೋಪಯ್ಯ
ಮಡಿಕೇರಿ, ಎ.2: ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗಿರಿಜನರ ಪ್ರತ್ಯೇಕ ಸಭೆ ನಡೆಸಲಾಗುವುದೆಂದು ಶಾಸಕ ಕೆ.ಜಿ.ಬೋಪಯ್ಯ ಪ್ರತಿಭಟನಾ ನಿರತ ಬುಡಕಟ್ಟು ಜನರಿಗೆ ಭರವಸೆ ನೀಡಿದ್ದಾರೆ.
ನಗರದ ಗಿರಿಜನ ಅಭಿವೃದ್ಧಿ ಇಲಾಖೆ ಕಚೇರಿ ಎದುರು ಕಳೆದ 6 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಬುಡಕಟ್ಟು ಜನರನ್ನು ಭೇಟಿಯಾದ ಶಾಸಕರು ಕಾನೂನಿನ ತೊಡಕಿನಿಂದ ಕೆಲವು ಸಮಸ್ಯೆಗಳು ಬಗೆಹರಿಯದೆ ಉಳಿದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ತಿತಿಮತಿ ವ್ಯಾಪ್ತಿಯಲ್ಲಿ 56 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಇಲ್ಲಿ ಗಿರಿಜನರು ಪುನರ್ವಸತಿ ಪಡೆದುಕೊಳ್ಳಬಹುದಾಗಿದೆ. ಪ್ರತಿಯೊಬ್ಬರಿಗೆ ಒಂದು ಎಕರೆ ಭೂಮಿಯನ್ನು ನೀಡಲು ಅಸಾಧ್ಯವೆಂದು ಅಭಿಪ್ರಾಯಪಟ್ಟ ಶಾಸಕ ಕೆ.ಜಿ. ಬೋಪಯ್ಯ, ಇರುವಷ್ಟು ಭೂಮಿಯನ್ನು ಹಂಚಿಕೆ ಮಾಡಿಕೊಂಡು ನೆಲೆಸುವ ಮೂಲಕ ಕೃಷಿ ಕಾರ್ಯವನ್ನು ಕೂಡ ನಡೆಸುವಂತೆ ಸಲಹೆ ನೀಡಿದರು.
ಮಾಯಮುಡಿ, ಚೆನ್ನಂಗೊಲ್ಲಿ ಹಾಗೂ ನಂಜರಾಯಪಟ್ಟಣದಲ್ಲಿ ಗಿರಿಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ನ್ಯಾಯಾಲಯದಿಂದ ತಡೆಯಾಜ್ಞೆ ಇರುವುದರಿಂದ ಕೆಲವು ಅಡಚಣೆಗಳು ಎದುರಾಗಿದೆ. ಸರಕಾರ ಮತ್ತು ಅಧಿಕಾರಿಗಳನ್ನೆ ನೆಚ್ಚಿಕೊಳ್ಳದೆ, ತಾವು ಕೂಡ ಪ್ರತಿವಾದಿಗಳಾಗಲು ಅವಕಾಶವನ್ನು ನ್ಯಾಯಾಲಯದಲ್ಲಿ ಕೋರುವಂತೆ ಬೋಪಯ್ಯ ತಿಳಸಿದರು.
ಇಲಾಖೆ ನ್ಯಾಯಾಲಯದಲ್ಲಿ ಹೋರಾಟ ನಡೆಸಿದರೆ, ವ್ಯಾಜ್ಯ ಇತ್ಯರ್ಥ ವಿಳಂಬವಾಗುವ ಸಾಧ್ಯತೆಗಳಿವೆೆ. ಆದ್ದರಿಂದ ಉಚಿತ ಕಾನೂನು ನೆರವನ್ನು ಪಡೆದು ನ್ಯಾಯಾಲಯದಲ್ಲಿ ಸ್ವತಃ ತಾವು ಕಾನೂನಿನ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು. ಇತ್ತೀಚೆಗೆ ಬೆಂಗಳೂರಿನಲ್ಲಿ ಕಾಡಾನೆ ಉಪಟಳ ಮತ್ತು ಗಿರಿಜನರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷ ಸಭೆ ನಡೆಸಿದ್ದಾರೆ. ಗಿರಿಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜಿಲ್ಲಾ ಮಟ್ಟದಲ್ಲಿ ಪ್ರತೀ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲು ನಿರ್ಧಾರವಾಗಿದೆ. ತ್ರೈಮಾಸಿಕ ಸಭೆ ಮತ್ತು ವಿಧಾನಸಭೆಯಲ್ಲಿ ಬುಡಕಟ್ಟು ಜನರ ಸಮಸ್ಯೆಗಳ ಬಗ್ಗೆ ಗಮನ ಸೆಳೆೆಯುವುದಾಗಿ ಬೋಪಯ್ಯ ಭರವಸೆ ನೀಡಿದರು.
ಟಿಂಬರ್ ಮರ್ಚೆಂಟ್‌ಗಳ ಕಡತ ವಿಲೇವಾರಿ ಬೇಗ ಆಗುತ್ತೆ:
ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ಗಿರಿಜನರ ವಿಚಾರದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರು ಹೆಚ್ಚು ಆಸಕ್ತಿಯನ್ನು ತೋರುತ್ತಿದ್ದು, ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸಮಸ್ಯೆಯನ್ನು ಬಗೆಹರಿಸಲು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ ಎಂದರು. ಆದರೆ, ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ ಅವರು, ಬುಡಕಟ್ಟು ಜನರು ಕಾನೂನು ಭಾಗದಲ್ಲಿ ಕೂಡ ಆಲೋಚನೆ ಮಾಡಬೇಕೆಂದರು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ನೀವು ಬಡವರು ಎನ್ನುವ ಕಾರಣಕ್ಕೆ ಅಧಿಕಾರಿಗಳು ನಿಮ್ಮ ಕಡತವನ್ನು ವಿಲೇವಾರಿ ಮಾಡುತ್ತಿಲ್ಲ. ಟಿಂಬರ್ ವ್ಯಾಪಾರಿಗಳ ಕಡತ ಬಂದರೆ ತಕ್ಷಣ ವಿಲೇವಾರಿಯಾಗುತ್ತದೆ ಎಂದು ಸುನೀಲ್ ಸುಬ್ರಮಣಿ ಆರೋಪಿಸಿದರು.
ಹಳ್ಳಿಗಟ್ಟು ಪ್ರದೇಶದಲ್ಲಿ 5 ಎಕರೆ ಜಾಗ ಪುನರ್ವಸತಿಗೆ ಮೀಸಲಿಟ್ಟಿರುವ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ ಪ್ರಸ್ತಾಪಿಸಿದಾಗ, ಇದಕ್ಕೆ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿ ತಿತಿಮತಿ ಭಾಗದಲ್ಲೆ ಆಶ್ರಯ ಕಲ್ಪಿಸುವಂತೆ ಮನವಿ ಮಾಡಿದರು. ನಮಗೆ ವಿಷ ನೀಡಿ ಕೊಂದು ಬಿಡಿ ತಲೆ ತಲಾಂತರದಿಂದ ನಾವು ವಾಸವಿರುವ ಕಾಡನ್ನು ದೇವರ ಕಾಡು ಎಂದು ಹೇಳಲಾಗುತ್ತಿದೆ. ನಮಗೆ ಯಾಕೆ ಇಷ್ಟು ಹಿಂಸೆ ನೀಡಲಾಗುತ್ತಿದೆ. ನಾವು ಯಾರನ್ನಾದರೂ ಕೊಲೆ ಮಾಡಿದ್ದೀವಾ ? ಮೋಸ ಮಾಡಿದ್ದೀವಾ?. ಪ್ರತಿ ದಿನ ನಮ್ಮನ್ನು ಕಿರುಕುಳ ನೀಡಿ ಸಾಯಿಸುವ ಬದಲು ಎಲ್ಲರಿಗೂ ವಿಷ ನೀಡಿ ಒಂದೇ ಸಲ ಸಾಯಿಸಿಬಿಡಿ. ಆಗ ಸರಕಾರದ ತಲೆ ನೋವು ತಪ್ಪುತ್ತದೆ ಎಂದು ಪ್ರತಿಭಟನಾ ನಿರತ ಆದಿವಾಸಿ ಮಹಿಳೆಯೊಬ್ಬರು ಶಾಸಕ ಕೆ.ಜಿ. ಬೋಪಯ್ಯ ಎದುರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ ವಾರ ಜಿಲ್ಲೆಗೆ ಬಂದು ಸಭೆ ನಡೆಸುವುದಾಗಿ ತಿಳಿಸಿದ್ದು, ಪ್ರತಿಭಟನೆಯನ್ನು ಕೈಬಿಡುವಂತೆ ನಮ್ಮ ಮೂಲಕ ಸಂದೇಶ ಕಳುಹಿಸಿದ್ದಾರೆ ಎಂದು ಕೆ.ಜಿ.ಬೋಪಯ್ಯ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಇದಕ್ಕೆ ಒಪ್ಪದ ಬುಡಕಟ್ಟು ಜನರು ಕಳೆದ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ, ಇನ್ನು ಒಂದು ವಾರ ಇಲ್ಲೇ ಧರಣಿ ಮುಂದುವರಿಸಲು ನಮಗೆ ಯಾವುದೇ ಕಷ್ಟವಿಲ್ಲ. ಬೇಡಿಕೆ ಈಡೇರುವವರೆಗೆ ಇಲ್ಲೇ ಇರುತ್ತೇವೆಂದು ಧರಣಿ ಮುಂದುವರಿಸಿದರು.
ಆದಿವಾಸಿಗಳ ಅಭಿವೃದ್ಧಿಗಾಗಿ ಇರುವ ಅನುದಾನವನ್ನು ಶಾಸಕರುಗಳ ನೇತೃತ್ವದಲ್ಲಿ ಖರ್ಚುಮಾಡಲು ಸೂಕ್ತ ಕ್ರಮ ಕೈಗೊಳ್ಳಬೆೇಕೆಂದು ಅವರು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಭೇಟಿ: ಶಾಸಕರುಗಳ ಭೇಟಿಗೂ ಮೊದಲು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರು ಧರಣಿ ನಿರತರನ್ನು ಭೇಟಿಯಾಗಿ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದರು. ಆದರೆ, ಇದಕ್ಕೆ ಒಪ್ಪದ ಬುಡಕಟ್ಟು ಜನರು ಸರಕಾರದ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಒತ್ತಾಯಿಸಿ ಧರಣಿ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.