ಹೊನ್ನಾವರ: ಗ್ಯಾಸ್ ಟ್ಯಾಂಕರ್ ಪಲ್ಟಿ
ಹೊನ್ನಾವರ, ಎ.2: ಪಟ್ಟಣದ ಬೆಂಗಳೂರು ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಅನಿಲ ತುಂಬಿದ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಮಂಗಳೂರಿನಿಂದ ಕುಮಟಾ ಮಾರ್ಗವಾಗಿ ಹುಬ್ಬಳ್ಳಿಗೆ ಸಾಗುತ್ತಿದ್ದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ. ಅನಿಲ ಸೋರಿಕೆಯಾಗದಿರುವುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅನಿಲ ಸೋರುವಿಕೆಯ ಭಯದಲ್ಲಿ ಜನರು ಆತಂಕಕ್ಕೊಳಗಾದರು. ಸುತ್ತಮುತ್ತಲಿನ ಅಂಗಡಿ ಮಳಿಗೆಗಳು ಹಾಗೂ ಹೊಟೇಲ್‌ಗಳನ್ನು ಬಂದ್ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಹೊನ್ನಾವರ ತಹಶೀಲ್ದಾರ್ ಜಿ.ಎಂ.ಬೋರಕರ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಸುರಕ್ಷತಾ ಕ್ರಮಕೈಗೊಂಡರು. ಹೆದ್ದಾರಿಯಲ್ಲಿ ಟ್ಯಾಂಕರ್ ಉರುಳಿದ್ದರಿಂದ ಕೆಲವು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು. ನಂತರ ಹೆದ್ದಾರಿಯ ಇನ್ನೊಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಸುಗಮವಾಗಿ ಸಾಗುವಂತೆ ಕ್ರಮ ಕೈಗೊಳ್ಳಲಾಯಿತು.