ಆಸ್ಟ್ರೇಲಿಯಾ ಪ್ರಜೆಗಳಿಂದ ಬಡವರಿಗೆ ಸೂರು ನಿರ್ಮಾಣ
<ಶ್ರೀನಿವಾಸ ಬಾಡ್ಕರ್
ಕಾರವಾರ, ಎ.2: ಇಂದಿನ ದಿನದಲ್ಲಿ ಆಪ್ತರೇ ಆಪ್ತರಿಗೆ ಸಹಾಯ ಸಹಕಾರ ಮಾಡಲು ಮುಂದಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಆಸ್ಟ್ರೇಲಿಯಾ ಪ್ರಜೆಗಳು ಇಲ್ಲಿನ ಬಡ ಜನರಿಗೆ ಸೂರು ಕಲ್ಪಿಸಲು ಮುಂದಾಗಿದ್ದಾರೆ.
ಮಾನವೀಯತೆಯ ನೆಲೆಯಲ್ಲಿ ಬಡವರು ಮತ್ತು ನಿರ್ಗತಿಕರ ಸೇವೆಯೇ ಮನುಷ್ಯ ಧರ್ಮವೆಂದು ಭಾವಿಸಿ ಸ್ವಯಂ ಪ್ರೇರಿತವಾಗಿ ಆಸ್ಟ್ರೇಲಿಯಾ ದೇಶದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆಸಲ್ಲಿಸುತಿದ್ದಾರೆ. ಹ್ಯಾಬಿಟ್ಯಾಬ್ ಫಾರ್ ಹ್ಯುಮ್ಯಾನಿಟಿ ಇಂಟರ್ ನ್ಯಾಷನಲ್ ಎಂಬ ಅಂತಾರಾಷ್ಟ್ರೀಯ ಸಂಘಟನೆ ಯೊಂದರ ಯೋಜನೆಯಡಿ 12 ಜನರ ತಂಡ ಜಿಲ್ಲೆಯ ಹಿಂದುಳಿದ ಗ್ರಾಮದಲ್ಲಿನ ಬಡವರ ಕುಟುಂಬಗಳಿಗೆ ಸ್ವತಃ ಶ್ರಮದಾನದ ಮೂಲಕ, ಫಲಾಪೇಕ್ಷೆ ಇಲ್ಲದೆ ಸೂರು ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡು ಜನರ ಗಮನಸೆಳೆದಿದ್ದಾರೆ.
ಪ್ರೇರಣೆಯಾದ ವಿದೇಶಿಗರು: ಆಸ್ಟ್ರೇಲಿಯಾ ದೇಶದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆಸಲ್ಲಿಸುತ್ತಿರುವ ಮಹನೀಯರು, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡ ನೌಕರರ ಗುಂಪು ತಾಲೂಕಿನ ಮುಡಗೇರಿಯ ಹಿಂದುಳಿದ ಬಡ ಕುಟುಂಬಗಳಿಗೆ ಮನೆ ನಿರ್ಮಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. ತೆರೆ ಮರೆಯಲ್ಲಿಯೇ ಯಾವುದೇ ಪ್ರಚಾರದ ಅಪೇಕ್ಷೆ ಇಲ್ಲದೆ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ದೇಶದ ಯುವಕರಿಗೆ, ಪ್ರಜ್ಞಾವಂತ ನಾಗರಿಕರಿಗೆ ಪ್ರೇರಣೆಯಾಗಿದೆ. ತಮಗೆ ಲಭಿಸಿದ ಅಲ್ಪಕಾಲಾವಧಿ ರಜೆಯಲ್ಲಿ ಅವರು ತಮ್ಮಿಂದಾಗುವಷ್ಟು ಶ್ರಮದಾನದ ಮೂಲಕ ಸಮಾಜ ಸೇವೆ ಮಾಡಬೇಕೆನ್ನುವ ತುಡಿತ ಹೊಂದಿದ್ದಾರೆ. ನ್ಯಾಯಾಧೀಶ, ತನಿಖಾಧಿಕಾರಿ, ಶಿಕ್ಷಕಿ, ಪತ್ರಕರ್ತ, ಐ.ಟಿ ಮ್ಯಾನೇಜರ್, ಹೇರ್ ಡಿಸೈನರ್, ಟ್ರಾವೆಲ್ ಏಜೆಂಟ್, ವೆಬ್ ಡಿಸೈನರ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ಇವರು ಹ್ಯಾಬಿಟ್ಯಾಬ್ ಯಂಗ್ ಲೀಡರ್ಸ್ ಬಿಲ್ಟ್ ಸಂಸ್ಥೆಯಡಿ ಹ್ಯಾಬಿಟ್ಯಾಬ್ ಫಾರ್ ಹ್ಯುಮಾನಿಟಿ ಇಂಟರ್ ನ್ಯಾಷನಲ್ ಎಂಬ ಅಂತಾರಾಷ್ಟ್ರೀಯ ಸಂಘಟನೆಯೊಂದರ ಯೋಜನೆಯಡಿ, ಸ್ಥಳೀಯ ಕೆ.ಡಿ.ಡಿ.ಸಿ ಸಂಸ್ಥೆಯೊಂದಿಗೆ ಸಾಮಾಜಿಕ ಕಾರ್ಯ ಕೈಗೊಂಡಿದ್ದಾರೆ. ಬಿಡುವಿನ ಮಧ್ಯೆ ಶ್ರಮ: ನಮ್ಮ ಉದ್ಯೋಗದಲ್ಲಿನ ಎರಡು ವಾರದ ರಜೆಯ ಬಿಡುವು ಮಾಡಿಕೊಂಡು ಭಾರತಕ್ಕೆ ಬರುವ ಇವರು ಒಂದು ವಾರ ಪ್ರೇಕ್ಷಣೀಯ ಸ್ಥಳಗಳ ಪ್ರವಾಸ ಮಾಡಿದರೆ, ಇನ್ನುಳಿದ ಒಂದುವಾರ ಸಮಾಜ ಸೇವೆಯಲ್ಲಿ ತೊಡಗುತ್ತಾರೆ. ಇವರು ದೇಶದಲ್ಲಿನ ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ಸರಕಾರದಿಂದ ವಸತಿರಹಿತ ಬಡ ಕುಟುಂಬಗಳಿಗೆ ಮನೆ, ನಿರ್ಮಿಸಿಕೊಡಲು ಶ್ರಮದಾನದ ಮೂಲಕ ನೆರವಾಗುವುದಲ್ಲದೆ, ಯುವ ಸಂಘಟನೆಯ ಪಡೆಯನ್ನು ಕಟ್ಟಿಕೊಡುವುದಾಗಿದೆ.
ಬಡವರಿಗೆ ಮನೆ ನಿರ್ಮಾಣ
ಅನೇಕ ಕುಟುಂಬಗಳಿಗೆ ಮನೆಗಳನ್ನು ಕಟ್ಟಿಕೊಡುವ ಗುರಿ ಹೊಂದಿರುವ ಇವರು ಈಗಾಗಲೇ ಮುಡಗೇರಿ, ಹೊಸಾಳಿಯಲ್ಲಿ 6 ಮನೆ ಹಾಗೂ 10 ಶೌಚಾಲಯಗಳನ್ನು ನಿರ್ಮಿಸುತ್ತಿದು,್ದ ಇನ್ನೂ ಹಲವಾರು ನಿರ್ಗತಿಕರಿಗೆ ಮನೆ ಮತ್ತು ಶೌಚಾಲಯಗಳನ್ನು ಈ ಅಂತಾರಾಷ್ಟ್ರೀಯ ಸಮಾಜ ಸೇವಕರ ಪಡೆ ಗುರಿ ಹೊಂದಿದೆ. ಭಾರತದಲ್ಲಿ 74 ದಶಲಕ್ಷ ಜನರಿಗೆ ಮನೆಯೇ ಇಲ್ಲವಾಗಿದ್ದು, ಶೇ. 60ರಷ್ಟು ಮನೆಗಳಿಗೆ ಶೌಚಾಲ ಯವೇ ಇಲ್ಲವಾಗಿದೆ. ಇಂತವರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಬಗ್ಗೆ ದೇಶಾದ್ಯಂತ 5 ಲಕ್ಷಕ್ಕೂ ಅಧಿಕ ಯುವ ಜನರಿಗೆ ಜಾಗೃತಿ ಮೂಡಿಸುವ ಕೆಲಸವೂ ನಡೆಯುತ್ತಿದೆ. ಸ್ಥಳೀಯರ ಸಹಕಾರ: ತಾಲೂಕಿನ ಮುಡಗೇರಿ ಪಂಚಾಯತ್ ವ್ಯಾಪ್ತಿಯ ಹಿಂದುಳಿದ ಪ್ರದೇಶದಲ್ಲಿ ಸರಕಾರದಿಂದ ದೊರೆತ ಮನೆ ಹಾಗೂ ಶೌಚಾಲಗಳನ್ನು ನಿರ್ಮಿಸುತ್ತಿದ್ದು , ಇವರಿಗೆ ತಾಲೂಕು ಪಂಚಾಯತ್ ಸದಸ್ಯ ಸುರೇಂದರ ಗಾಂವಕರ, ಮುಡಗೇರಿ ಪಂಚಾಯತ್ ಸದಸ್ಯ ಸಾಯಿನಾಥ ನಾಯ್ಕ, ಕೆ.ಡಿ.ಡಿ.ಸಿ ಸಿಬ್ಬಂದಿ, ಗ್ರಾ ಪಂ, ಸ್ಥಳೀಯ ದೇಶೀಯ ಕಲಾಕಾರ ಹಾಗೂ ಪಿ ಬಾಯ್ಸಾ ಸದಸ್ಯರು ನೆರವಿಗೆ ಮುಂದಾಗಿದ್ದಾರೆ.