×
Ad

‘ಉಳಿತಾಯ ಯೋಜನೆಗಳ ಬಗ್ಗೆ ಪೊಲೀಸರಿಗೆ ಅರಿವು ಅಗತ್ಯ’

Update: 2016-04-02 22:09 IST

 ಮಡಿಕೇರಿ,ಎ.2: ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಿಸ್ತು, ಕಾನೂನು, ಕರ್ತವ್ಯ ಪ್ರಜ್ಞೆ ಹೆಚ್ಚಿಸಿಕೊಳ್ಳುವುದರ ಜೊತೆಗೆ ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ ಪಡೆಯುವಂತಾಗಲು ವಾರಕ್ಕೊಮ್ಮೆಯಾದರೂ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ನಿವೃತ್ತ ಪೊಲೀಸ್ ಅಧೀಕ್ಷಕರಾದ ಕೆ.ಎಸ್.ರವಿರಾಜು ಸಲಹೆ ನೀಡಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪೊಲೀಸರು ಸಮಾಜ ಮುಖಿಯಾಗಿ ಸೇವೆ ಸಲ್ಲಿಸಿ ಜನ ಮೆಚ್ಚುಗೆಗೆ ಪಾತ್ರರಾಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ. ಆ ದಿಸೆಯಲ್ಲಿ ನಮ್ರತೆ ಮತ್ತು ವಿನಯವನ್ನು ಬೆಳೆಸಿಕೊಳ್ಳುವಂತಾಗಬೇಕು ಎಂದು ರವಿರಾಜು ಹೇಳಿದರು. ದಿನದ 24 ಗಂಟೆಯೂ ಮನೆಯಿಂದ ದೂರವಿದ್ದು, ಕರ್ತವ್ಯ ನಿರ್ವಹಿಸುವ ಪೊಲೀಸರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಇದನ್ನು ನಿಭಾಯಿಸಲು ಸಂಪಾದಿಸಿದ ಹಣದಲ್ಲಿ ಸ್ವಲ್ಪವಾದರೂ ಉಳಿತಾಯ ಮಾಡಿ ಉತ್ತಮ ಬದುಕು ಕಟ್ಟಿಕೊಳ್ಳುವತ್ತ ಪೊಲೀಸರು ಗಮನ ಹರಿಸಬೇಕಿದೆ ಎಂದು ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿಯನ್ನು ವಿತರಿಸಿ ಮಾತನಾಡಿದ ಏರ್‌ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ, ಪೊಲೀಸ್ ಸೇವೆಯು ಜವಾಬ್ದಾರಿಯುತ ಹಾಗೂ ಕರ್ತವ್ಯ ನಿಷ್ಠ ಕಠಿಣ ಸೇವೆಯಾಗಿದ್ದು, ಸಮಾಜದ ರಕ್ಷಣೆಯಲ್ಲಿ ಪ್ರಮುಖಪಾತ್ರ ವಹಿಸುತ್ತದೆ.

ಸೈಬರ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್‌ಸ್ಟೇಬಲ್ ಪಿ.ಕೆ.ರಾಜೇಶ್ ಅವರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಟ್ರೋಫಿಯನ್ನು ವಿತರಿಸಲಾಯಿತು. ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಮಂಜುನಾಥ್ ಅವರನ್ನು ಗೌರವಿಸಲಾಯಿತು. ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಲೆಫ್ಟ್ಟಿನೆಂಟ್ ಜನರಲ್(ನಿವೃತ್ತ) ಬಿ.ಸಿ.ನಂದ, ಕರ್ನಲ್ ಕೆ.ಸಿ.ಸುಬ್ಬಯ್ಯ, ಡಿವೈಎಸ್ಪಿ ರಾಜಶೇಖರ್, ಡಿಎಆರ್ ವಿಭಾಗದ ಪೊಲೀಸ್ ನಿರೀಕ್ಷಕರಾದ ತಿಮ್ಮೇಗೌಡ, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬಂದಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News