×
Ad

‘ಕೊಟ್ಪಾ ಕಾಯ್ದೆ: ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ’

Update: 2016-04-02 22:11 IST

ಸಾಗರ,ಎ.2: 2013ಕ್ಕೆ ಜಾರಿಗೆ ಬಂದ ತಂಬಾಕು ನಿಯಂತ್ರಣ ಕೊಟ್ಪಾಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಹಾಗೂ ಶಿವಮೊಗ್ಗ ಜಿಲ್ಲೆಯನ್ನು ಕೊಟ್ಪಾ ಅನುಷ್ಠಾನಿತ ಜಿಲ್ಲೆಯನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಂಬಾಕು ನಿಯಂತ್ರಣಾ ಘಟಕದ ರಾಜ್ಯ ನೋಡೆಲ್ ಅಧಿಕಾರಿ ಡಾ. ಚಂದ್ರಶೇಖರ್ ಹೇಳಿದ್ದಾರೆ.

   ಇಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ದೇಶದಲ್ಲಿ ಶೇ.45ರಷ್ಟು ಕೊಟ್ಪಾಕಾಯ್ದೆ ಅನುಷ್ಠಾನಿತವಾಗಿದೆ. ಮುಂದಿನ ಎ.1ರೊಳಗೆ ಶೇ. 85ರಷ್ಟು ಅನುಷ್ಟಾನಕ್ಕೆ ತರಲು ಕೇಂದ್ರದ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಜಾಗೃತಿ ಕಾರ್ಯಕ್ರಮ ಹಾಗೂ ಕಾನೂನು ಮೀರಿ ವ್ಯವಹರಿಸುತ್ತಿರುವವರಿಗೆ ದಂಡ ಹಾಕುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ತೀರ್ಥಹಳ್ಳಿ ತಾಲೂಕುಗಳಲ್ಲಿ ಕಾಯ್ದೆಯನ್ವಯ ಜಾಗೃತಿ ಮತ್ತು ದಂಡ ಹಾಕಲಾಗಿದೆ ಎಂದರು. ಗುಟ್ಕಾ ಹಾಗೂ ಸಿಗರೇಟ್ ಮಾರಾಟ ಮಾಡುತ್ತಿರುವ ಅಂಗಡಿಗಳು ಕಡ್ಡಾಯವಾಗಿ ನಾಮಫಲಕವನ್ನು ಹಾಕಬೇಕು. ಜೊತೆಗೆ 18 ವರ್ಷದೊಳಗಿನವರಿಗೆ ತಂಬಾಕಿನಿಂದ ತಯಾರಿಸಿದ ವಸ್ತುಗಳನ್ನು ನೀಡಬಾರದು. ಶಾಲಾ ಕಾಲೇಜು ಆವರಣದಿಂದ 100 ಮೀ. ಆಸುಪಾಸಿನಲ್ಲಿ ಗುಟ್ಕಾ, ಸಿಗರೇಟ್ ಮಾರಾಟ ಮಾಡುವಂತಿಲ್ಲ. ಶಾಲಾಕಾಲೇಜಿನ ಎದುರು ತಂಬಾಕು ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ಬಿತ್ತಿಪತ್ರ ಅಳವಡಿಸಬೇಕು. ಅಳವಡಿಸದೆ ಇದ್ದಲ್ಲಿ ಆ ಶಾಲಾಕಾಲೇಜಿನ ಮುಖ್ಯಸ್ಥರ ವಿರುದ್ಧ್ದ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ತಾಲೂಕಿನ ವಿವಿಧ ಭಾಗಗಳಲ್ಲಿ ಎರಡು ತಂಡಗಳಾಗಿ ವಿಂಗಡಿಸಿಕೊಂಡು ಗುಟ್ಕಾ ಮತ್ತು ಸಿಗರೇಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಹಾಗೂ ಕಾನೂನು ಪಾಲನೆ ಮಾಡದ ಅಂಗಡಿ ಮಾಲಕರಿಗೆ ದಂಡ ವಿಧಿಸಲಾಯಿತು. ಸಂದರ್ಭದಲ್ಲಿ ಎ.ಎಸಿ. ನಿಶಾ ಜೇಮ್ಸ್, ತಾಲೂಕು ವೈದ್ಯಾಧಿಕಾರಿ ಡಾ. ಕೆ.ಪಿ.ಅಚ್ಚುತ್, ಪಶು ವೈದ್ಯಾಧಿಕಾರಿ ಡಾ. ತಿಮ್ಮಪ್ಪ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಗುರುಪ್ರಸಾದ್, ನಗರಠಾಣೆ ಸಬ್ ಇನ್‌ಸ್ಪೆಕ್ಟರ್ ಸುರೇಶ್, ಶಿಕ್ಷಣ ಇಲಾಖೆಯ ಕೆ.ಎನ್.ಗಾವಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News