×
Ad

ದ್ವಿತೀಯ ಪಿಯುಸಿ ವೌಲ್ಯಮಾಪನ ಬಹಿಷ್ಕಾರ ಸರಿಯಲ್ಲ: ಯುವ ಕಾಂಗ್ರೆಸ್

Update: 2016-04-02 22:13 IST

ಶಿವಮೊಗ್ಗ, ಎ.2: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ವೌಲ್ಯಮಾಪನ ಬಹಿಷ್ಕರಿಸಿದರೆ, ವೌಲ್ಯಮಾಪನ ಕೇಂದ್ರಗಳಿಗೆ ಮುತ್ತಿಗೆ ಹಾಕಿ ಉಪನ್ಯಾಸಕರಿಗೆ ಘೇರಾವ್ ಮಾಡಲಾಗುವುದು. ಈ ವೇಳೆ ಉದ್ವಿಗ್ನ ವಾತಾವರಣ ಉಂಟಾದರೆ ಅದಕ್ಕೆ ಸಂಘಟನೆಯಾಗಲಿ ಅಥವಾ ಸರಕಾರವಾಗಲಿ ಜವಾಬ್ದಾರಿಯಲ್ಲ. ಉಪನ್ಯಾಸಕರ ಸಂಘವೇ ನೇರ ಹೊಣೆಯಾಗುತ್ತದೆ’ ಎಂದು ಯುವ ಕಾಂಗ್ರೆಸ್ ಘಟಕ ಎಚ್ಚರಿಕೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಶನಿವಾರ ನಗರದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಡಿಡಿಪಿಯುರವರಿಗೆ ಮನವಿ ಪತ್ರ ಅರ್ಪಿಸಿತು. ಈ ಮನವಿಯ ಮೂಲಕ ಸರಕಾರ ಹಾಗೂ ಇಲಾಖೆಯ ಗಮನಕ್ಕೆ ತರುವ ಕೆಲಸ ಮಾಡಿದ್ದೇವೆ. ಇನ್ನಾದರೂ ಉಪನ್ಯಾಸಕರು ತಮ್ಮ ನಿರ್ಧಾರ ಬದಲಾಯಿಸಿಕೊಳ್ಳಬೇಕು ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ. ಎಚ್ಚರಿಕೆ: ಬಹಿಷ್ಕಾರ ಹಿಂಪಡೆಯುವಂತೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಸಿಎಂರವರು ಉಪನ್ಯಾಸಕರೊಂದಿಗೆ ಸಭೆ ಕೂಡ ನಡೆಸಿ, ಮನವೊಲಿಸುವ ಕೆಲಸ ಮಾಡಿದ್ದಾರೆ. ಆದರೆ ಉಪನ್ಯಾಸಕ ಸಂಘವು ವೌಲ್ಯಮಾಪನ ಬಹಿಷ್ಕಾರ ಅಚಲ ಎಂಬ ಉದ್ದಟತನದ ಹೇಳಿಕೆ ನೀಡಿರುವುದು ಖಂಡನಾರ್ಹವಾದುದಾಗಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಈಗಾಗಲೇ ದ್ವಿತೀಯ ಪಿಯುಸಿಯ ರಸಾಯನ ಶಾಸ್ತ್ರ ವಿಷಯದ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಎರಡು ಬಾರಿ ಪರೀಕ್ಷೆ ಮುಂದೂಡಲಾಗಿದೆ. ಇದರಿಂದ ಹಲವು ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಮಂಡ್ಯದಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಕೂಡ ಮಾಡಿಕೊಳ್ಳುವಂತಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಉಪನ್ಯಾಸಕರ ಸಂಘವು ವೌಲ್ಯಮಾಪನ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಂಡಿರುವುದು ಸರಿಯಾದ ಕ್ರಮವಲ್ಲ. ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ನಾವು ಕೂಡ ಸ್ಪಂದಿಸುತ್ತೇವೆ. ಮೊದಲು ವೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರ ಹಿಂಪಡೆಯಬೇಕು ಎಂದು ಸಂಘಟನೆ ಮನವಿ ಮಾಡಿಕೊಂಡಿದೆ. ಉಪನ್ಯಾಸಕರು ತಮ್ಮ ನಿರ್ಧಾರ ಬದಲಾಯಿಸದಿದ್ದರೆ ರಾಜ್ಯದ 48 ವೌಲ್ಯಮಾಪನ ಕೇಂದ್ರಗಳಿಗೆ ಮುತ್ತಿಗೆ ಹಾಕುವುದರ ಜೊತೆಗೆ ಘೇರಾವ್ ಮಾಡುತ್ತೇವೆ. ಉದ್ವಿಗ್ನ ವಾತಾವರಣ ಉಂಟಾದರೆ ನಾವಾಗಲಿ ಅಥವಾ ಸರಕಾರವಾಗಲಿ ಜವಾಬ್ದಾರಿಯಲ್ಲ. ಇದಕ್ಕೆ ಉಪನ್ಯಾಸಕ ಸಂಘವೇ ನೇರ ಹೊಣೆಯಾಗಲಿದೆ ಎಂದು ಸಂಘಟನೆ ಮನವಿಯಲ್ಲಿ ಎಚ್ಚರಿಕೆ ನೀಡಿದೆ.  

ುನವಿ ಅರ್ಪಿಸುವ ಸಂದಭರ್ದಲ್ಲಿ ಸಂಘಟನೆಯ ಮುಖಂಡ ಕೆ.ರಂಗನಾಥ್, ಜಿಲ್ಲಾ ಅಧ್ಯಕ್ಷ ಎಂ.ಪ್ರವೀಣ್‌ಕುಮಾರ್, ನಗರ ಘಟಕದ ಅಧ್ಯಕ್ಷ ಟಿ.ವಿ.ರಂಜಿತ್, ಪ್ರಧಾನ ಕಾರ್ಯದರ್ಶಿ ಎಚ್.ಪಿ.ಗಿರೀಶ್, ಸಿದ್ದಾರ್ಥ್ ಭಂಡಾರ್ಕರ್, ಪ್ರದೀಪ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News