ಮೂಲನಿವಾಸಿ ಗಿರಿಜನರಿಗೆ ಬಿಪಿಎಲ್ ಪಡಿತರ ಚೀಟಿ ನೀಡಿ: ಕುಂಜಪ್ಪ ಸೂಚನೆ
ಮಡಿಕೇರಿ,ಎ.2: ಜಿಲ್ಲೆಯ ಮೂಲನಿವಾಸಿ ಗಿರಿಜನರಿಗೆ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿಗಳನ್ನು ತಕ್ಷಣ ತಲುಪಿಸುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಎ.ಎಂ.ಕುಂಜಪ್ಪ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕುಡಿಯುವ ನೀರು, ಬರ ಪರಿಹಾರ ನಿರ್ವಹಣೆ, ನರೇಗಾ ಅನುಷ್ಠಾನ, ಎಸ್‌ಸಿಪಿ/ಟಿಎಸ್‌ಪಿ ಯೋಜನೆ ಮತ್ತಿತರ ಬಗ್ಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೂಲ ನಿವಾಸಿ ಗಿರಿಜನ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ತಲುಪಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾಳಜಿ ವಹಿಸಬೇಕೆಂದರು. ಈ ಸಂಬಂಧ ಮಾಹಿತಿ ನೀಡಿದ ಆಹಾರ ಇಲಾಖೆ ಉಪ ನಿರ್ದೇಶಕರಾದ ಚಂದ್ರಕಾಂತ್ ನಾಯಕ್ ಚುನಾವಣಾ ಗುರುತಿನ ಚೀಟಿ ಇಲ್ಲದಿರುವುದರಿಂದ ಪಡಿತರ ಕಾರ್ಡ್ ವಿತರಣೆ ಕಷ್ಟಸಾಧ್ಯವಾಗಿದೆ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಕುಂಜಪ್ಪ ಚುನಾವಣಾ ಗುರುತಿನ ಚೀಟಿ ಪಡೆಯುವ ಪ್ರಕ್ರಿಯೆಯು ನಿರಂತರವಾಗಿದ್ದು, ಮೂಲ ನಿವಾಸಿ ಗಿರಿಜನರಿಗೆ ಗುರುತಿನ ಚೀಟಿ ನೀಡುವ ನಿಟ್ಟಿನಲ್ಲಿ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರು ಹಾಡಿಗಳಿಗೆ ತೆರಳಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ತಹಶೀಲ್ದಾರರು ತಳಮಟ್ಟದ ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸುವಂತೆ ನಿರ್ದೇಶನ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್.ಶ್ರೀರಂಗಪ್ಪ ಅವರು ಮೂಲ ನಿವಾಸಿ ಗಿರಿಜನರಿಗೆ ಬಿಪಿಎಲ್ ಪಡಿತರ ಚೀಟಿ ಇಲ್ಲದಿರುವುದರಿಂದ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲು ಅಸಾಧ್ಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಜೀವ್ ಆರೋಗ್ಯ ಭಾಗ್ಯ ಯೋಜನೆಯಡಿ ಆರೋಗ್ಯ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಬಹುದಾಗಿದೆ ಎಂದು ತಿಳಿಸಿದರು. ಕುಡಿಯುವ ನೀರಿಗೆ ಆದ್ಯತೆ ನೀಡಿ
ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗುವ ಲಕ್ಷಣಗಳು ಕಾಣದಿರುವುದರಿಂದ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಪಟ್ಟಿಯನ್ನು ಪಿಡಿಒಗಳಿಂದ ತರಿಸಿಕೊಂಡು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗುವಂತೆ ಆಯುಕ್ತರು
ೂಚನೆ ನೀಡಿದರು. ಕುಡಿಯುವ ನೀರು ಯೋಜನೆಗಳಿಗೆ ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು. ಬಹು ಗ್ರಾಮ ಕುಡಿಯುವ ನೀರು ಯೋಜನೆ ಪ್ರಗತಿ ಸಾಧಿಸಬೇಕು. ನಗರ ಮತ್ತು ಪಟ್ಟಣ ಪಂಚಾಯತ್ ಪ್ರದೇಶಗಳಲ್ಲಿ ಕುಡಿಯುವ ನೀರು ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಭತ್ತ ಬೆಳೆಯುವ ಪ್ರದೇಶದ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಮೀನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಬಹುದಾಗಿದೆ ಎಂದು ಸಲಹೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್‌ಶಶಿಧರ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಮನೋಹರ್, ಪೌರಾಯುಕ್ತರಾದ ಬಿ.ಬಿ.ಪುಷ್ಪಾವತಿ ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ಎಂ.ರವಿಕುಮಾರ್, ತಾಪಂ ಇಒಗಳಾದ ಪಡ್ನೇಕರ್, ಅಚ್ಚಯ್ಯ, ಚಂದ್ರಶೇಖರ್, ತಹಶೀಲ್ದಾರ್‌ಗಳಾದ ಕುಂಞಮ್ಮ, ಶಿವಪ್ಪ, ಮಹದೇವ ಸ್ವಾಮಿ, ಜಿಪಂ ಮುಖ್ಯ ಯೋಜನಾಧಿಕಾರಿ ತಾಕತ್‌ರಾವ್, ಉಪ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ರಾಜು, ತೋಟಗಾರಿಕೆ ಉಪ ನಿರ್ದೇಶಕರಾದ ಗಿರೀಶ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ. ನಾಗರಾಜು, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ದರ್ಶನ್, ಐಟಿಡಿಪಿ ಇಲಾಖೆ ಅಧಿಕಾರಿ ಸತೀಶ್ ಉಪಸ್ಥಿತರಿದ್ದರು.
ತಹಶೀಲ್ದಾರರ ವಿರುದ್ಧ ಅಸಮಾಧಾನ
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿ ಜಿಲ್ಲೆಯ ಮೂರು ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲ. ತಾಲೂಕು ಕಚೇರಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದು ಪ್ರಾದೇಶಿಕ ಆಯುಕ್ತರಲ್ಲಿ ಮನವಿ ಮಾಡಿದರು. ತಹಶೀಲ್ದಾರ್‌ಗಳ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ವಿವರಿಸಿದರು. ಜಿಲ್ಲೆಯ ಮೂರು ತಾಲೂಕು ಕಚೇರಿಗಳಲ್ಲಿ ಆರ್‌ಟಿಸಿ, ಪ್ರಮಾಣಪತ್ರ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಿಗೆ ಸಾರ್ವಜನಿಕರನ್ನು ಶತಾಯಿಸುತ್ತಿದ್ದು, ಸುಗಮವಾಗಿ ಕೆಲಸವಾಗುತ್ತಿಲ್ಲ ಎಂದು ಕೆ.ಜಿ.ಬೋಪಯ್ಯ ಟೀಕಿಸಿದರು.