ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ವಜಾಕ್ಕೆ ಸಿಎಂ ಆದೇಶ
ಶಿವಮೊಗ್ಗ, ಮಾ.2: ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ ನಡೆದ ಬಹುಕೋಟಿ ರೂ. ವೌಲ್ಯದ ಗೋಲ್ಡ್ ಲೋನ್ ಹಗರಣಕ್ಕೆ ಸಂಬಂಧಿಸಿದಂತೆ, ಸಹಕಾರಿ ಇಲಾಖೆ ಸಲ್ಲಿಸಿರುವ ತನಿಖಾ ವರದಿಯ ಆಧಾರದ ಮೇಲೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ವಜಾಗೊಳಿಸಿ, ತಪ್ಪಿತಸ್ಥರ ವಿರುದ್ಧ್ದ ಕ್ರಮಕೈಗೊಳ್ಳುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯರವರು ಸಹಕಾರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಸಿಎಂ ಪತ್ರ ಬರೆದಿರುವುದನ್ನು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದರಿಂದ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯು ಮತ್ತೆ ವಜಾಗೊಳ್ಳಲಿದೆಯೇ? ಎಂಬ ವಿಷಯ ಚರ್ಚೆಯ ಮುನ್ನೆಲೆಗೆ ಬಂದಿದೆ. ಸ್ವತಃ ಸಿಎಂರವರೇ ಸಹಕಾರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿರುವುದು ಆಡಳಿತ ಮಂಡಳಿಯ ನಿದ್ದೆಗೆಡುವಂತೆ ಮಾಡಿದೆ. ಕಾಗೋಡು ಎಫೆಕ್ಟ್: ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ ನಡೆದ 62 ಕೋಟಿ ರೂ. ಮೊತ್ತದ ಗೋಲ್ಡ್ ಲೋನ್ ಹಗರಣಕ್ಕೆ ಸಂಬಂಧಿಸಿದಂತೆ ಸರಕಾರ ನಿಯೋಜಿಸಿದ್ದ ಸಹಕಾರಿ ಇಲಾಖೆಯ ತನಿಖಾ ಸಮಿತಿಯು ಇತ್ತೀಚೆಗೆ ಸರಕಾರಕ್ಕೆ ತನ್ನ ವರದಿ ಸಲ್ಲಿಸಿ ಹಲವು ಶಿಫಾರಸು ಮಾಡಿತ್ತು. ಅವ್ಯವಹಾರದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರಗಿಸಬೇಕು, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ವಜಾಗೊಳಿಸಬೇಕು ಹಾಗೆಯೇ ದುರ್ಬಳಕೆಯಾದ ಹಣವನ್ನು ಶೇ. 18 ರ ಬಡ್ಡಿ ದರದಲ್ಲಿ ತಪ್ಪಿತಸ್ಥರಿಂದ ವಸೂಲಿ ಮಾಡಬೇಕು ಎಂಬುವುದು ತನಿಖಾ ಸಮಿತಿಯ ವರದಿಯಲ್ಲಿದ್ದ ಪ್ರಮುಖ ಶಿಫಾರಸುಗಳಾಗಿದ್ದವು.
ಇತ್ತೀಚೆಗೆ ಮುಕ್ತಾಯವಾದ ವಿಧಾನಮಂಡಲ ಅಧಿವೇಶನದಲ್ಲಿವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ ನಡೆದ ಹಗರಣ ಪ್ರತಿಧ್ವನಿಸಿತ್ತು. ವಿಧಾನಸಭಯಲ್ಲಿ ಮಾಜಿ ಸಚಿವ ಲಕ್ಷ್ಮಣ್ ಸವದಿಯವರು ವಿಷಯ ಪ್ರಸ್ತಾಪಿಸಿ ಮಾತನಾಡಿದ್ದರು. ಸಿಎಂ ಪತ್ರ
ಸ್ಪೀಕರ್ ಕಾಗೋಡು ತಿಮ್ಮಪ್ಪ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ತತ್‌ಕ್ಷಣವೇ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ವಜಾಗೊಳಿಸುವ ಪ್ರಕ್ರಿಯೆ ಆರಂಭಿಸುವಂತೆ ಹಾಗೂ ಇದಕ್ಕೆ ಎದುರಾಗುವ ಕಾನೂನು ತೊಡಕುಗಳನ್ನು ತ್ವರಿತಗತಿಯಲ್ಲಿ ಪರಿಹರಿಸಿಕೊಳ್ಳುವಂತೆ ಮತ್ತು ಈ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ನೇರವಾಗಿ ತಮಗೆ ವರದಿ ಸಲ್ಲಿಸು ವಂತೆ ಸಹಕಾರಿ ಇಲಾಖೆಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. ಆತಂ
: ಹಗರಣ ಬಯಲಿಗೆ ಬಂದ ವೇಳೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯನ್ನು ವಜಾಗೊಳಿಸಲಾಗಿತ್ತು. ಆದರೆ ಆಡಳಿತ ಮಂಡಳಿಯ ಕೆಲ ಸದಸ್ಯರು ಸರಕಾರದ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದು, ಆದೇಶಕ್ಕೆ ತಡೆ ತರುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಸಹಕಾರಿ ಇಲಾಖೆಯ ತನಿಖಾ ವರದಿಯಲ್ಲಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ವಜಾಗೊಳಿಸುವಂತೆ ಶಿಫಾರಸು ಮಾಡಿದೆ. ಮತ್ತೊಂದೆಡೆ ಸಿಎಂ ಕೂಡ ಸಹಕಾರಿ ಇಲಾಖೆಗೆ ಪತ್ರ ಬರೆದು ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ವಲಯದಲ್ಲಿ ಆತಂಕ ಸೃಷ್ಟಿಸಿವೆೆ. ಮತ್ತೆ ಆಡಳಿತ ಮಂಡಳಿ ವಜಾಗೊಳ್ಳುವುದೇ? ಎಂಬ ಆತಂಕದ ಕರಿಛಾಯೆ ಆವರಿಸಿದ್ದು, ಮುಂದಿನ ದಿನಗಳಲ್ಲಿ ಸಹಕಾರಿ ಇಲಾಖೆ ಯಾವ ರೀತಿಯ ಕ್ರಮಕೈಗೊಳ್ಳಲಿದೆ ಎಂಬುವುದನ್ನು ನೋಡಬೇಕಿದೆ.