×
Ad

ಪಿಪಿಪಿ ಮಾದರಿಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ: ಶಾಸಕ ಪ್ರಸನ್ನಕುಮಾರ್

Update: 2016-04-02 22:22 IST

ಶಿವಮೊಗ್ಗ,ಎ.2: ನನೆಗುದಿಗೆ ಬಿದ್ದಿರುವ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿ.ಪಿ.ಪಿ.) ದಲ್ಲಿ ಅಭಿವೃದ್ಧಿಪಡಿಸಲು ಸರಕಾರ ನಿರ್ಧರಿಸಿದೆ ಎಂದು ಶಾಸಕ ಕೆ.ಬಿ.ಪ್ರಸನ್ನಕುಮಾರ್ ತಿಳಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ವಿಮಾನ ನಿಲ್ದಾಣದಲ್ಲಿ ತಲೆದೋರಿರುವ ತಾಂತ್ರಿಕ ಸಮಸ್ಯೆ ಪರಿಹರಿಸಲು ರೈಟ್ಸ್ ಎಂಬ ಹೆಸರಿನ ಖಾಸಗಿ ಸಂಸ್ಥೆಯೊಂದು ಮುಂದೆ ಬಂದಿತ್ತು. ಈಗಿರುವ ರನ್ ವೇ ವ್ಯವಸ್ಥೆಯಲ್ಲಿ ಅಲ್ಪಬದಲಾವಣೆ ತಂದರೆ, ಅಡಚಣೆ ಇಲ್ಲದೆ ವಿಮಾನ ಹಾರಾಟ ಸಾಧ್ಯವೆಂದು ಹೇಳಿದೆ. ಈ ಸಂಸ್ಥೆಗೆ ಸರಕಾರವು ಡಿ.31 ರಂದು ಪತ್ರ ಬರೆದು ತಾಂತ್ರಿಕ ದೋಷ ನಿವಾರಿಸುವ ಸಂಬಂಧ ಪರಿಶೀಲನೆ ನಡೆಸಿ ವರದಿ ನೀಡಬೇಕೆಂದು ಸೂಚಿಸಿತ್ತು. ಆ ಪ್ರಕಾರ ಜ.12 ಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದ ತಂಡವು ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ನೀಡಿದೆ. ಅದೇ ಸಂಸ್ಥೆಗೆ ಪಿ.ಪಿ.ಪಿ. ಮಾದರಿಯಲ್ಲಿ ಟೆಂಡರ್ ನೀಡಲು ಸರಕಾರ ನಿರ್ಧರಿಸಿದೆ. ಇದೇ ಸಂಸ್ಥೆಯು ಪ್ರವಾಸೊದ್ಯಮ ಸ್ಥಳವಾದ ಜೋಗ್ ಜಲಪಾತದ ಸಮಗ್ರ ಅಭಿವೃದ್ಧಿಗೆ ಮುಂದೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಸಾಲ ತೀರುವಳಿ ಪತ್ರ: ಆಶ್ರಯ ಯೋಜನೆಯಡಿ ಮನೆ ಕಟ್ಟಲು ಸಾಲ ಪಡೆದಿದ್ದ ಫಲಾನುಭವಿಗಳ ಸಾಲವನ್ನು ರಾಜ್ಯ ಸರಕಾರ ಮನ್ನಾ ಮಾಡಿದೆ. ಶಿವಮೊ

ಗ್ಗ ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಎ. 4ರಂದು ನಡೆಯಲಿರುವ ಸಮಾರಂಭದಲ್ಲಿ ವಸತಿ ಸಚಿವ ಅಂಬರಿಷ್ ಫಲಾನುಭವಿಗಳಿಗೆ ಸಾಲ ತೀರುವಳಿ ಪತ್ರ ನೀಡಲಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ 1,443 ಫಲಾನುಭವಿಗಳು ಆಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಾಲ ಪಡೆದಿದ್ದರು. 3.60 ಲಕ್ಷ ಸಾಲವನ್ನು ವಿವಿಧ ವಸತಿ ಯೋಜನೆಯಡಿ ಸರಕಾರ ನೀಡಿತ್ತು. ಇದರ ಬಡ್ಡಿ 2.88 ಕೋಟಿಯಾಗಿದ್ದು ಒಟ್ಟು 6,48,69,689 ರೂ.ವನ್ನು ಸರಕಾರ ಮನ್ನಾ ಮಾಡಿದೆ. ಈ ಫಲಾನುಭವಿಗಳಿಗೆ ಎ.4ರಂದು ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಚಿವರು ಸಾಲ ತೀರುವಳಿ ಪತ್ರ ವಿತರಿಸುವರು ಎಂದರು.

ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳುವರು ಎಂದರು.

ಸರಕಾರವು ನೀಡಿದ ಸಾಲವನ್ನು ಮಾತ್ರ ವಸತಿ ಯೋಜನೆಯಡಿ ಮನ್ನಾ ಮಾಡಲಾಗುವುದು. ಬ್ಯಾಂಕಿನಿಂದ ಫಲಾನುಭವಿಗಳು ಪಡೆದ ಸಾಲವನ್ನು ಮನ್ನಾ ಮಾಡುತ್ತಿಲ್ಲ. ಈ ಸಾಲಕ್ಕೆ ಸರಕಾರ ಜವಾಬ್ದಾರಿ ಅಲ್ಲ ಎಂದ ಅವರು, ಈಗ ಹೊಸ ಯೋಜನೆಯಡಿ ಆಶ್ರಯ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲು 1.25 ಲಕ್ಷ ರೂ. ಸರಕಾರ ಉಚಿತವಾಗಿ ನೀಡಲಿದೆ. ಹೆಚ್ಚುವರಿ ಹಣ ಬೇಕಾದಲ್ಲಿ ಬ್ಯಾಂಕಿನಿಂದ ಸಾಲ ಪಡೆಯುವ ವ್ಯವಸ್ಥೆಯನ್ನು ಸರಕಾರ ಮಾಡಿಕೊಡಲಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಸೂಡಾ ಅಧ್ಯಕ್ಷ ಎನ್.ರಮೇಶ್, ಮೇಯರ್ ಎಸ್.ಕೆ.ಮರಿಯಪ್ಪ, ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ, ಎನ್. ಮಂಜುನಾಥ್, ಅಲ್ತಾಫ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಸರಕಾರಿ ಸಿಟಿ ಬಸ್ ಸಂಚಾರ ನಿಶ್ಚಿತ

ಶಿವಮೊಗ್ಗ ನಗರಕ್ಕೆ ಜೆನ್ ನರ್ಮ್ ಯೋಜನೆಯಡಿ ಮಂಜೂರಾಗಿರುವ 65 ಸರಕಾರಿ ಸಿಟಿ ಬಸ್‌ಗಳ ಸಂಚಾರ ನಿಶ್ಚಿತವಾಗಿದೆ. ಇನ್ನೆರೆಡು ತಿಂಗಳಲ್ಲಿ ಸರಕಾರಿ ಸಿಟಿ ಬಸ್‌ಗಳ ಸಂಚಾರ ಆರಂಭವಾಗಲಿದೆ ಎಂದು ಶಾಸಕ ಕೆ.ಬಿ.ಪ್ರಸನ್ನಕುಮಾರ್ ತಿಳಿಸಿದ್ದಾರೆ. ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ನಿರ್ಮಾಣಕ್ಕೆ ಸರಕಾರ ಒಪ್ಪಿಗೆ ನೀಡಿದೆ. ಈಗಿರುವ ಕಚೇರಿಯ ಪಕ್ಕದಲ್ಲಿ ಹೊಸ ಕಚೇರಿ ನಿರ್ಮಾಣವಾಗಲಿದೆ. ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ರೈತರಿಗೆ ನೀಡಲಾಗಿರುವ ನಿವೇಶನದ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಪೌರಾಡಳಿತ ಸಚಿವರು ಅಧಿಕಾರಿಗಳಿಗೆ ಸೂ

ಚನೆ ನೀಡಿದ್ದಾರೆ ಎಂದರು. ಮಾಚೇನಹಳ್ಳಿಯ ಕಿಯೋನಿಕ್ಸ್ ಕಟ್ಟಡದ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಲಾಗಿದ್ದು, ಹೊಸದಾಗಿ ಐಟಿ ಕಂಪೆನಿಗಳು ಬರಲು ಉಚಿತ ವ್ಯವಸ್ಥೆ ಮಾಡಿಕೊಡುವುದಾಗಿ ಘೋಷಿಸಲಾಗಿದೆ. ಶಿವಮೊಗ್ಗದ ನೂತನ ಜೈಲು ಕಾಮಗಾರಿ ಪೂರ್ಣಗೊಳಿಸಲು 25 ಕೋಟಿ ರೂ. ಪ್ರಸಕ್ತ ಬಜೆಟ್‌ನಲ್ಲಿ ಸರಕಾರ ಬಿಡುಗಡೆ ಮಾಡಿದೆ. ನೆಹರೂ ಕ್ರೀಡಾಂಗಣದಲ್ಲಿ ಪೆವಿಲಿಯನ್ ನಿರ್ಮಾಣಕ್ಕೆ 2 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News