ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸರಕಾರ ಬದ್ಧ: ಮುಖ್ಯಮಂತ್ರಿ
ಬೆಂಗಳೂರು, ಎ.2: ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹಿಂದಿನ ಸರಕಾರ ನೀಡುತ್ತಿದ್ದ ಅನುದಾನವನ್ನು ನಾವು ಅಧಿಕಾರಕ್ಕೆ ಬಂದ ನಂತರ ದ್ವಿಗುಣಗೊಳಿಸಿದ್ದೇವೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 1,374 ಕೋಟಿ ರೂ.ಅನುದಾನವನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಆನ್‌ಲೈನ್ ಲಾಟರಿ(ಖುರ್ರಾ) ಮೂಲಕ ಹಜ್‌ಯಾತ್ರಾರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ ಸೇರಿದಂತೆ ಅವರ ಅಭಿವೃದ್ಧಿಗೆ ಪೂರಕವಾದ ಎಲ್ಲ ರೀತಿಯ ಕಾರ್ಯಕ್ರಮಗಳಿಗೆ ಸರಕಾರ ಬೆಂಬಲ ನೀಡುತ್ತಿದೆ. ಅಲ್ಪಸಂಖ್ಯಾತರು ವಾಸಿಸುವಂತಹ ಕಾಲನಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿ ಸಲು ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ ಹಾಗೂ ರಕ್ಷಣೆ ಹಾಗೂ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ನಮ್ಮ ಸರಕಾರವು ಸಾಮಾಜಿಕ ನ್ಯಾಯ, ಜಾತ್ಯತೀತ ತತ್ವಕ್ಕೆ ಬದ್ಧವಾಗಿ ನಡೆದುಕೊಳ್ಳುತ್ತಿದೆ. ಅಲ್ಪಸಂಖ್ಯಾತರು ಆರ್ಥಿಕ, ಸಾಮಾಜಿಕವಾಗಿ ಸಬಲರಾಗಬೇಕು. ಸಂವಿಧಾನ ರೀತಿ ನಾಡಿನ ಸಂಪತ್ತು, ಅಧಿಕಾರದಲ್ಲಿ ನ್ಯಾಯಯುತವಾದ ಪಾಲು ಸಿಗಬೇಕು ಎಂಬುದು ನಮ್ಮ ಬದ್ಧತೆಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ರಾಜ್ಯದಿಂದ ಪ್ರಸಕ್ತ ಸಾಲಿನ ಪವಿತ್ರ ಹಜ್‌ಯಾತ್ರೆಗೆ ತೆರಳಲು ಸುಮಾರು 20 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ. ಆದರೆ, ಕೇಂದ್ರ ಸರಕಾರದ ಭಾರತೀಯ ಹಜ್ ಸಮಿತಿಯು ರಾಜ್ಯದಿಂದ 4,477 ಮಂದಿಗೆ ಅವಕಾಶ ಕಲ್ಪಿಸಿದೆ ಎಂದು ಅವರು ಹೇಳಿದರು.
ಈ ಪೈಕಿ 70 ವರ್ಷ ಮೇಲ್ಪಟ್ಟವರು ಹಾಗೂ ಸತತವಾಗಿ ಮೂರು ಬಾರಿ ಅರ್ಜಿ ಸಲ್ಲಿಸಿ ಅವಕಾಶ ಸಿಗದವರನ್ನು ಯಾತ್ರೆಗೆ ನೇರವಾಗಿ ಆಯ್ಕೆ ಮಾಡಲಾಗಿದೆ. ಇನ್ನುಳಿದಂತೆ 2,173 ಮಂದಿಯನ್ನು ಆನ್‌ಲೈನ್ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಹಜ್‌ಭವನದ ಕಾಮಗಾರಿಯನ್ನು ಪೂರ್ಣ ಗೊಳಿಸಲು ಅಗತ್ಯವಿರುವ 25 ಕೋಟಿ ರೂ.ಅನುದಾನವನ್ನು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಒದಗಿಸಲಾಗಿದೆ. ದೇಶದಲ್ಲೇ ಸುಂದರವಾದ ಹಜ್‌ಭವನ ಇದಾಗಲಿದ್ದು, ಬಹುಮುಖಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯದ ಸಮೃದ್ಧಿಗಾಗಿ ಪ್ರಾರ್ಥಿಸಿ: ಹಜ್‌ಯಾತ್ರೆಗೆ ಆಯ್ಕೆಯಾಗದವರು ನಿರಾಶರಾಗಬಾರದು. ‘ಅಲ್ಲಾಹ್’ ಬಯಸಿದಾಗ ನಿಮಗೂ ಅವಕಾಶಸಿಗುತ್ತದೆ. ರಾಜ್ಯದಲ್ಲಿ ಭೀಕರ ಬರಗಾಲವಿರು ವುದರಿಂದ ಹಜ್‌ಯಾತ್ರೆಗೆ ತೆರಳುತ್ತಿರುವವರು ರಾಜ್ಯದಲ್ಲಿ ಮಳೆ, ಬೆಳೆ ಉತ್ತಮವಾಗಿರಲಿ, 6.50 ಕೋಟಿ ಜನರ ಒಳಿತಿಗಾಗಿ ಪ್ರಾರ್ಥಿಸಿ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
ರಾಜ್ಯಸಭಾ ಸದಸ್ಯ ಡಾ.ಕೆ.ರಹ್ಮಾನ್‌ಖಾನ್ ಮಾತನಾಡಿ, ಇಡೀ ವಿಶ್ವದಲ್ಲೇ ಹಜ್‌ಯಾತ್ರಿಗಳಿಗೆ ಅತ್ಯುತ್ತಮ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಮಲೇಶಿಯಾ. ನಮ್ಮ ದೇಶದಲ್ಲೂ ಇಂತಹ ಸೌಲಭ್ಯಗಳನ್ನು ಒದಗಿಸಲು ತಾನು ಕೇಂದ್ರ ಸಚಿವನಾಗಿದ್ದಾಗ ಪ್ರಯತ್ನ ಪಟ್ಟಿದ್ದೆ. ಮುಂದಿನ ದಿನಗಳಲ್ಲಿ ಆ ಯೋಜನೆ ಕಾರ್ಯಗತವಾಗಲಿ. ರಾಜ್ಯದಿಂದ ಹಜ್‌ಯಾತ್ರೆಗೆ ತೆರಳುತ್ತಿರುವವರು ನಮ್ಮ ದೇಶ, ರಾಜ್ಯದ ಸುಖ, ಸಮೃದ್ಧಿಗಾಗಿ ಪ್ರಾರ್ಥಿಸಿ ಎಂದರು.
ರಾಜ್ಯ ಸರಕಾರವು ನೂತನ್ ಹಜ್‌ಘರ್ ನಿರ್ಮಾಣಕ್ಕೆ 2014-15ನೆ ಸಾಲಿನಲ್ಲಿ 5 ಕೋಟಿ ರೂ., 2015-16ನೆ ಸಾಲಿನಲ್ಲಿ 12 ಕೋಟಿ ರೂ.ಹಾಗೂ ಇದೀಗ 2016-17ನೆ ಸಾಲಿನಲ್ಲಿ 25 ಕೋಟಿ ರೂ.ಗಳಂತೆ ಒಟ್ಟಾರೆ ಮೂರು ವರ್ಷಗಳಲ್ಲಿ 47 ಕೋಟಿ ರೂ.ಅನುದಾನವನ್ನು ಒದಗಿಸಿದೆ. ಇಡೀ ದೇಶದಲ್ಲೇ ಮಾದರಿ ಹಾಗೂ ಸುಂದರವಾದ ಹಜ್‌ಘರ್‌ನ್ನು ಸರಕಾರ ನಿರ್ಮಿಸುತ್ತಿದೆ ಎಂದು ವಾರ್ತಾ ಮತ್ತು ಹಜ್ ಸಚಿವ ಆರ್.ರೋಷನ್‌ಬೇಗ್ ತಿಳಿಸಿದರು.
ಹೊರ ರಾಜ್ಯಗಳು ಹಾಗೂ ಜಿಲ್ಲೆಗಳಿಂದ ಸಿಇಟಿ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬೆಂಗಳೂರಿಗೆ ಆಗಮಿಸುವಂತಹ ವಿದ್ಯಾರ್ಥಿಗಳು, ಯಾತ್ರಿಗಳಿಗೆ ಈ ಹಜ್‌ಘರ್‌ನಲ್ಲಿ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗುವುದು. ವರ್ಷದ ಎಲ್ಲ ದಿನಗಳಲ್ಲೂ ನಿರಂತರವಾಗಿ ಚಟುವಟಿಕೆಗಳು ನಡೆಯುವಂತೆ ಈ ಹಜ್‌ಘರ್‌ನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಡಾ.ಖಮರುಲ್ ಇಸ್ಲಾಮ್, ಶಾಸಕರಾದ ತನ್ವೀರ್‌ಸೇಠ್, ಎನ್.ಎ.ಹಾರೀಸ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್‌ಯೂಸುಫ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಮಸೂದ್ ಫೌಜ್ದಾರ್, ವೌಲಾನ ಲುತ್ಫುಲ್ಲಾ ರಶಾದಿ, ವೌಲಾನ ಮಖ್ಸೂದ್ ಇಮ್ರಾನ್, ವೌಲಾನ ಹನೀಫ್ ಅಫ್ಸರ್ ಅಝೀಝಿ, ವೌಲಾನ ಝೈನುಲ್ ಆಬಿದೀನ್, ಮುಫ್ತಿ ಮುಹಮ್ಮದ್ ಇಫ್ತಿಖಾರ್ ಅಹ್ಮದ್‌ಖಾಸ್ಮಿ ಮತ್ತಿತರರು ಉಪಸ್ಥಿತರಿದ್ದರು.