ಎಸಿಬಿ ರದ್ದತಿಗೆ ಆಗ್ರಹಿಸಿ ದೇವೇಗೌಡರಿಂದ ನಾಳೆ ಕಾಲ್ನಡಿಗೆ ಜಾಥಾ
ಬೆಂಗಳೂರು, ಎ. 2: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆ ಆದೇಶವನ್ನು ರದ್ದುಪಡಿಸಿ, ಲೋಕಾಯುಕ್ತ ಸಂಸ್ಥೆ ಬಲಪಡಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎ.4ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಆನಂದ ರಾವ್ ವೃತ್ತದಿಂದ ಸ್ವಾತಂತ್ರ ಉದ್ಯಾನವನದವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಶನಿವಾರ ಪದ್ಮನಾಭನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸಿಬಿ ರಚನೆ ಆದೇಶ ರದ್ದತಿಗೆ ಸಂಬಂಧ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಲಾಗುವುದು. ರಾಜ್ಯ ಸರಕಾರ ಲೋಕಾಯುಕ್ತ ಸಂಸ್ಥೆ ದುರ್ಬಲಗೊಳಿಸಲು ಮುಂದಾಗಿದೆ ಎಂದು ದೂರಿದರು.
ವಿಧಾನಸಭೆಯಲ್ಲಿ ಎಸಿಬಿ ವಿರುದ್ಧ ಜೆಡಿಎಸ್ ಸಮರ್ಥವಾಗಿ ಹೋರಾಟ ನಡೆಸಿದೆ. ಬಿಜೆಪಿ ಅಧಿಕೃತ ವಿರೋಧ ಪಕ್ಷವಾದರೂ, ಜೆಡಿಎಸ್‌ಗಿಂತ ನಾಲ್ಕೈದು ಮಂದಿ ಹೆಚ್ಚಿರಬಹುದು. ಆದರೆ, ಸ್ಪೀಕರ್ ಬಿಜೆಪಿಗೆ 5ಗಂಟೆ ಕಾಲಾವಕಾಶ ನೀಡಿ, ಜೆಡಿಎಸ್‌ಗೆ ಕೇವಲ 2ಗಂಟೆ ಮಾತನಾಡಲು ಅವಕಾಶ ಕಲ್ಪಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಅತೃಪ್ತಿ ಇಲ್ಲ: ಪಕ್ಷದಲ್ಲಿ ಅತೃಪ್ತರ್ಯಾರು ಇಲ್ಲ. ಆದರೆ, ಒಂದಿಬ್ಬರು ಶಾಸಕರು ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಅಸಮಾಧಾನಗಳಿವೆ ಎಂದ ಅವರು, ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಸಿಬಿ ರದ್ದುಪಡಿಸುವ ಮೂಲಕ ತನ್ನ ಬದ್ಧತೆ ಸಾಬೀತುಪಡಿಸಲಿದೆ ಎಂದರು.
‘ಉತ್ತರ ಕರ್ನಾಟಕ ಭಾಗದ ನಾಲ್ಕೈದು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ನೀಡುವ ದೃಷ್ಟಿಯಿಂದ ಕಳಸಾ-ಬಂಡೂರಿ ವಿವಾದ ಇತ್ಯರ್ಥಕ್ಕೆ ಪ್ರಧಾನಿ ನರೇಂದ್ರ ಮೋದಿ ಬಳಿಗೆ ಮತ್ತೊಮ್ಮೆ ಸರ್ವಪಕ್ಷ ನಿಯೋಗ ಕೊಂಡೊಯ್ಯಬೇಕು.’
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.