×
Ad

ಇತಿಹಾಸ ತಿರುಚುವ ಜನಪ್ರಿಯ ಹಾಡುಗಳು: ಅ.ರಾ.ಮಹೇಶ್

Update: 2016-04-02 23:30 IST

ಬೆಂಗಳೂರು. ಎ.2: ಚಿರಕಾಲ ಗುನುಗುವಂತೆ ಮಾಡುವ ಜನ ಪ್ರಿಯ ಹಾಡುಗಳೂ ಒಮ್ಮಿಮ್ಮೆ ಇತಿಹಾಸವನ್ನು ತಿರುಚಿರುವ, ಸುಳ್ಳನ್ನೇ ಸತ್ಯವೆಂದು ಪ್ರತಿಪಾದಿಸುವ ಉದಾಹರಣೆಗಳು ಸಮಾಜದಲ್ಲಿ ಸಾಕಷ್ಟು ನಡೆಯುತ್ತಲಿವೆ ಎಂದು ಕವಿ, ದಲಿತ ಹೋರಾಟಗಾರ ಅ.ರಾ.ಮಹೇಶ್ ಅಭಿಪ್ರಾಯಪಟ್ಟರು.
ನಗರದ ಶ್ರೀಗಂಧದ ಕಾವಲು ಪ್ರದೇಶದ ಕೆಂಪೇಗೌಡ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ತಾಯಿಬೇರು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ಹಮ್ಮಿಕೊಂಡಿದ್ದ ‘ಹಾಡು ಹಾಡಿನ ಜಾಡು’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದರು.

ಬಂಗಾರದ ಮನುಷ್ಯ ಚಿತ್ರದ ‘ಆಗದು ಎಂದು’ ಎಂಬ ಗೀತೆಯಲ್ಲಿರುವ ‘ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ, ಕನ್ನಂಬಾಡಿಯ ಕಟ್ಟದಿದ್ದರೆ’ ಎಂಬ ಅಂಶವನ್ನು ಉಲ್ಲೇಖಿಸುತ್ತಾ ಅವರು ಮೇಲಿನ ಮಾತುಗಳನ್ನು ಹೇಳಿದರು. ಇವತ್ತಿಗೂ ಆಗ್ರಾದ ತಾಜ್‌ಮಹಲ್ ಕಟ್ಟಿದ್ದು ಯಾರೆಂದು ಕೇಳಿದರೆ ತಕ್ಷಣ ಷಹಜಹಾನ್ ಎಂಬ ಉತ್ತರ ಬರುತ್ತದೆ. ಅದೇ ಕನ್ನಂಬಾಡಿ ಕಟ್ಟೆ ಎಂದಕೂಡಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಆಸ್ಥಾನದಲ್ಲಿ ದಿವಾನರಾಗಿದ್ದ, ಕೇವಲ ನಾಲ್ಕು ವರ್ಷಗಳಷ್ಟೇ ಕನ್ನಂಬಾಡಿ ಕಟ್ಟೆಯ ಕಟ್ಟುವ ಕೆಲಸದಲ್ಲಿ ಇಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯನವರ ಹೆಸರನ್ನು ಸೂಚಿಸುವುದು ಇತಿಹಾಸಕ್ಕೆ ಬಗೆದ ದ್ರೋಹ. ನಾಲ್ವಡಿ ಕೃಷ್ಣರಾಜ ಒಡೆಯರ್ ತನ್ನ ಮೈಮೇಲಿದ್ದ ಒಡವೆಗಳನ್ನೂ ಮಾರಿ ದುಡ್ಡು ಹೊಂದಿಸಿ ಕಟ್ಟಿ ಮುಗಿಸಿದ್ದಾರೆ. ಆದರೆ ಅವರು ಶೂದ್ರರೆಂಬ ಕಾರಣಕ್ಕೆ ಅವರನ್ನು ಈ ಶ್ರೇಯಸ್ಸಿನ ಪಟ್ಟಿಯಿಂದ ಹೊರಗಿಟ್ಟು ನೋಡಲಾಗುತ್ತಿದೆ. ಇದೇ ಸುಳ್ಳು ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ಬಂಗಾರದ ಮನುಷ್ಯ ಚಿತ್ರದ ಹಾಡಿನಿಂದ ಎಂದು ಹೇಳಿದರು.
ಸಂಘಟಕ ವೀರೇಶ್ ಬಳ್ಳಾರಿ ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ನಾಡಿನ ಜನಪದ ಚಿಂತಕ ಮತ್ತು ಹಾಡುಗಾರ ಬಾನಂದೂರು ಕೆಂಪಯ್ಯ, ಜನಪದ ಎನ್ನುವುದು ತಾಯಿಬೇರು, ಅದನ್ನು ಕತ್ತರಿಸಿಕೊಂಡರೆ ಮನುಷ್ಯತ್ವದ ಹೆಮ್ಮರ ಉರುಳಿಬೀಳುತ್ತದೆ. ಅದನ್ನು ಬೆಳೆಸುವ ಜವಾಬ್ದಾರಿ ಇಂದಿನ ಪೀಳಿಗೆಯ ಮೇಲಿದೆ ಎಂದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಲಕ್ಕೂರು ಆನಂದ, ವಿ.ಆರ್.ಕಾರ್ಪೆಂಟರ್, ಲಕ್ಷ್ಮೀನಾರಾಯಣಸ್ವಾಮಿ, ಜಗದಾಂಬ,ಸುಹಾಸ್ ಮತ್ತಿತರ ಯುವ ಕವಿಗಳು ಕವಿತಾವಾಚನ ಮಾಡಿದರು. ಹಿರಿಯ ತಲೆಮಾರಿನ ಕೆಲವು ಪದ್ಯಗಳನ್ನು ವಾಚಿಸುವ ಮೂಲಕ ವಿ.ಎಂ.ಮಂಜುನಾಥ ಅವರು ಈ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ತಾಯಿಬೇರು ಸಂಸ್ಥೆಯ ಅಧ್ಯಕ್ಷ ಕೆ.ಎನ್.ನಾಗೇಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News