×
Ad

ಲೋಕಾಯುಕ್ತ ಉಳಿವಿಗಾಗಿ ಅನಿರ್ದಿಷ್ಟಾವಧಿ ಧರಣಿ

Update: 2016-04-02 23:32 IST

ಬೆಂಗಳೂರು, ಎ. 2: ಕರ್ನಾಟಕ ಲೋಕಾ ಯುಕ್ತ ಸಂಸ್ಥೆಯನ್ನು ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಕೊಲ್ಲಲು ಹೊರಟಿದೆ. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷ ರಾಜ್ಯದ ಭ್ರಷ್ಟ ಸರಕಾರದ ಜನವಿರೋಧಿ ಆದೇಶದ ವಿರುದ್ಧ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಧುಮುಕಿದೆ. ವಿನೂತನ ಪ್ರತಿಭಟನೆಯಲ್ಲಿ ಜನ ಸಾಮಾನ್ಯರು ಲೋಕಾಯುಕ್ತದ ಸಾವಿಗೆ ತಮ್ಮ ಶೋಕಾಚರಣೆ ವ್ಯಕ್ತಪಡಿಸಲು ತಮ್ಮ ಕೇಶ ಮಂಡನೆ ಮಾಡಿಸಿಕೊಂಡು ಪಕ್ಷದ ಮುಖಂಡರಾದ ರವಿಕೃಷ್ಣಾ ರೆಡ್ಡಿ, ವಿಜಯ ಕುಮಾರ್ ಶರ್ಮ, ಮೋಹನ್ ದಾಸರಿ ಸೇರಿದಂತೆ ಆರು ಹೋರಾಟಗಾರರು ಆರಂಭಿಸಿದ ಆಮರಣಾಂತ ಉಪವಾಸ ಸತ್ಯಾಗ್ರಹ ನಾಲ್ಕನೆ ದಿನವನ್ನು ಪೂರೈಸಿದೆ.
ಆಮ್ ಆದ್ಮಿ ಪಕ್ಷದ ಹೋರಾಟವನ್ನು ಬೆಂಬಲಿಸಿ ನಿವೃತ್ತ ಐಎಎಸ್ ಅಧಿಕಾರಿ ವಿಜಯಕುಮಾರ್ ಆಗಮಿಸಿ ಮಾತನಾಡಿ, ಸರಕಾರ ಸತತ ಮುರ್ನಾಲ್ಕು ವರ್ಷಗಳಿಂದ ಲೋಕಾಯುಕ್ತ ಸಂಸ್ಥೆಯನ್ನು ವ್ಯವಸ್ಥಿತವಾಗಿ ಮುಗಿಸಲು ಯತ್ನಿಸುತ್ತಿತ್ತು. ಈಗಿನ ಎಸಿಬಿ ರಚನೆ ಇದಕ್ಕೆ ಕೊನೆಯ ಮೊಳೆ ಎಂದು ಹೇಳಿದರು.
ಬೆಂಗಳೂರು ಆಟೊ ಒಕ್ಕೂಟ ಹಾಗೂ ಕನ್ನಡ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣ, ಲೋಕಾಯುಕ್ತ ಸಂಸ್ಥೆಯ ಶವ ಪೆಟ್ಟಿಗೆಯನ್ನು ಹೊತ್ತು ಮೈಸೂರ್ ಬ್ಯಾಂಕ್ ವೃತ್ತದಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ಮಾಡಿ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಎಂ.ಪಿ.ನಾಡಗೌಡರು ಮಾತನಾಡಿ, ಸಿದ್ದರಾಮಯ್ಯ ನವರು ಮೊದಲ ಬಾರಿ ಶಾಸಕರಾಗಿದ್ದಾಗ ಲೋಕಾಯುಕ್ತ ಜಾರಿಗೆ ಬಂದಿತ್ತು. ಮುಖ್ಯಮಂತ್ರಿಯಾದ ಮೇಲೆ ಅವರ ಸಮಾಜವಾದಿ ತನ ಬದಲಾಗಿ, ಮಜಾವಾದಿಯಾಗಿದ್ದಾರೆ ಎಂದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿಯವರು ಮಾತನಾಡಿ, ಈ ಹೋರಾಟಕ್ಕೆ ಅಣ್ಣಾ ಹಝಾರೆಯವರನ್ನು ಕರೆಸಬೇಕು, ರಾಜ್ಯದ 2-3 ಜಿಲ್ಲೆಗಳಲ್ಲಿ ಅವರು ಸಮಾವೇಶ ನಡೆಸಿ ಬೆಂಗಳೂರಿಗೆ ಬರಬೇಕು ಎಂದರು. ಇನ್ನು ನಾಲ್ಕನೆ ದಿನದಿಂದ ಉಪವಾಸ ವಿರುವ ರಾಜ್ಯ ಮುಖಂಡರಾದ ರವಿಕೃಷ್ಣಾ ರೆಡ್ಡಿ ಮಾತನಾಡಿ, ಲೋಕಾಯುಕ್ತ ಬಲ ಗೊಳ್ಳುವವರೆಗೂ ನಮ್ಮ ಹೋರಾಟ ನಿಲ್ಲುವು ದಿಲ್ಲ ಎಂದು ಹೇಳಿದರು.
 ಆಮ್ ಆದ್ಮಿ ಪಕ್ಷ ರಾಜ್ಯದ ಮಹಾ ಜನತೆಯ ಮೇಲೆ ನ್ಯಾಯಪರತೆ ಮತ್ತು ಭ್ರಷ್ಟಾಚಾರ ವಿರೋಧಿ ನಿಲುವಿನ ವಿಶ್ವಾಸ ವಿಟ್ಟು ಈ ಹೋರಾಟಕ್ಕೆ ಧುಮುಕುತ್ತಿದ್ದು, ಇದನ್ನು ಸಂಪೂರ್ಣವಾಗಿ ಬೆಂಬಲಿಸಲು ಮತ್ತೊಮ್ಮೆ ಕಳಕಳಿಯ ಮನವಿ ಮಾಡುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News