ಸಾಹಿತಿ ಮೇಲೆ ಹಲ್ಲೆಗೆ ಯತ್ನ
ಬೆಂಗಳೂರು, ಎ. 2: ಕ್ಷುಲ್ಲಕ ಕಾರಣಕ್ಕೆ ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಪುಸ್ತಕ ಮನೆ ಹರಿಹರ ಪ್ರಿಯ ಅವರ ಮೇಲೆ ಅಪರಿಚಿತರು ಹಲ್ಲೆಗೆ ಯತ್ನಿಸಿದ್ದು, ಈ ಸಂಬಂಧ ಇಲ್ಲಿನ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿನ ಕನಕಪುರ ರಸ್ತೆಯ ವಜಾರಹಳ್ಳಿಯ ಬಿಸಿಸಿ-ಎಸ್‌ಎಸ್ ಲೇಔಟ್‌ನಲ್ಲಿರುವ ಸಾಹಿತಿ ಹರಿಹರ ಪ್ರಿಯ ಅವರ ಪುಸ್ತಕ ಮನೆ ಎದುರು ಕಟ್ಟಡ ನಿರ್ಮಾಣದ ಕಾಮಗಾರಿ ಚಾಲ್ತಿಯಲ್ಲಿದೆ. ಆದರೆ, ಇಂದು ಮಧ್ಯಾಹ್ನ ಮನೆ ಮುಂಭಾಗದ ರಸ್ತೆಯಲ್ಲಿ ಜಲ್ಲಿ ಕ್ರಷರ್ ಲಾರಿಯ ಚಾಲಕ ಅನಗತ್ಯವಾಗಿ ಶಬ್ದ ಮಾಡುತ್ತಿದ್ದ. ಈ ಬಗ್ಗೆ ಪ್ರಶ್ನಿಸಿದ ಕಾರಣಕ್ಕಾಗಿ ಲಾರಿ ಚಾಲಕ ಮತ್ತು ಆತನ ಗುಂಪು ಸಾಹಿತಿ ಹರಿಹರ ಪ್ರಿಯರ ಮೇಲೆ ಹಲ್ಲೆಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿದ್ದು, ಆರೋಪಿಗಳ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣಾ ಪೊಲೀಸರು ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ಮಾತನಾಡಿದ ಸಾಹಿತಿ ಪುಸ್ತಕ ಮನೆ ಹರಿಹರ ಪ್ರಿಯ, ಪುಸ್ತಕ ಮನೆಯಲ್ಲಿ ಹಲವರು ಓದುಗರು ಇರುತ್ತಾರೆ. ಅವರಿಗೆ ತೊಂದರೆ ಆಗಬಾರದೆಂದು ರಸ್ತೆಯಲ್ಲಿ ಶಬ್ದ ಮಾಡುತ್ತಿದ್ದ ಲಾರಿ ಚಾಲಕನಿಗೆ ಪ್ರಶ್ನೆ ಮಾಡಿದ ಕಾರಣಕ್ಕಾಗಿಯೇ ಲಾರಿ ಚಾಲಕನ ಗುಂಪು ಮನೆಗೆ ಬಂದು ಹಲ್ಲೆಗೆ ಯತ್ನಿಸಿದೆ ಎಂದು ಆರೋಪಿಸಿದರು.
ತಮ್ಮ ಬಡಾವಣೆಯಲ್ಲಿ ಸೂಕ್ತ ರಕ್ಷಣೆ ಸಿಗುತ್ತಿಲ್ಲ, ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ರಕ್ಷಣೆ ನೀಡಲು ಮುಂದಾಗಬೇಕೆಂದು ಇದೇ ವೇಳೆ ಮನವಿ ಮಾಡಿದರು.