×
Ad

‘ಕನ್ನಡ ವಿಮರ್ಶಾ ಸಾಹಿತ್ಯ ಸತ್ತಿದೆ ಎನ್ನುವುದು ಬೊಗಳೆ’

Update: 2016-04-02 23:35 IST

ಬೆಂಗಳೂರು, ಎ.2: ಕನ್ನಡ ವಿಮರ್ಶಾ ಸಾಹಿತ್ಯ ಸತ್ತಿದೆ ಎಂದು ಕೆಲ ಪಂಡಿತರು ಬೊಗಳೆ ಬಿಡುತ್ತಿದ್ದಾರೆ. ಆದರೆ ಸಾಹಿತ್ಯ ಎನ್ನುವುದರಲ್ಲಿ ಸಾಹಿತ್ಯದ ಮರುಹುಟ್ಟು ಇದೆ ಎಂಬುವುದು ಅವರ ಅರಿವಿಗೆ ಬಂದಿಲ್ಲ ಎಂದು ಸಾಹಿತಿ ಡಾ.ಸಿರಾಜ್ ಅಹ್ಮದ್ ವ್ಯಂಗ್ಯವಾಡಿದ್ದಾರೆ.
ಶನಿವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪಲ್ಲವ ಪ್ರಕಾಶನ ಮತ್ತು ಬಯಲು ಬಳಗ ಆಯೋಜಿಸಿದ್ದ ಲೇಖಕ ಡಾ.ಸುರೇಶ್ ನಾಗಲಮಡಿಕೆ ರಚಿಸಿರುವ ಜನಪದ ಲೋಕದೃಷ್ಟಿ ಮೂಲಕ ಕನಕ ಸಾಹಿತ್ಯ ಅಧ್ಯಯನ ಮತ್ತು ಕಾಣ್ಕೆ, ಕಣ್ಕಟ್ಟು ಎಂಬ ಎರಡು ವಿಮರ್ಶಾ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡ ವಿಮರ್ಶಾ ಸಾಹಿತ್ಯ ಬಿಕ್ಕಟ್ಟಿನಲ್ಲಿರುವುದು ನಿಜ ಆದರೆ ಕೆಲ ಪಂಡಿತರು ವಿಮರ್ಶಾ ಸಾಹಿತ್ಯ ಸತ್ತೋಗಿದೆ, ಸತ್ತಿದೆ, ಸಾಯುತ್ತಿದೆ ಎಂದು ಹೇಳಿಕೊಂಡು ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ. ಆದರೆ ಈ ಮಹಾನುಭಾವರಿಗೆ ಸಾಹಿತ್ಯ ಎನ್ನುವುದರಲ್ಲೇ ಮರುಹುಟ್ಟು ಅಡಗಿದೆ ಎಂಬ ಅರಿವಿಲ್ಲ ಎಂದು ಹೇಳಿದರು.
 ಸಾಂಸ್ಕೃತಿಕ ನಾಯಕರೆನಿಸಿಕೊಂಡಿರುವವರು ಇಂದು ಜಾತಿವಾದಕ್ಕೆ ಮರುಳಾಗುತ್ತಿದ್ದಾರೆ. ಈ ಪರಿಣಾಮ ಕನ್ನಡ ಸಾಹಿತ್ಯದಲ್ಲಿ ದ್ವಂದ್ವನೀತಿ ತಲೆದೋರುತ್ತಿವೆ ಎಂದು ಹೇಳಿದ ಅವರು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಸೃಜನಶೀಲ ಸಾಹಿತಿಗಳ ಅಗತ್ಯವಿದೆ ಎಂದು ವ್ಯಾಖ್ಯಾನಿಸಿದರು.
 ಲೇಖಕರು ತಮ್ಮ ಕೃತಿಗಳಲ್ಲಿ ಸಮಾನತೆ ಮತ್ತು ಸಮಷ್ಟಿ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. ಜನಪದವನ್ನು ಕೇವಲ ವೌಖಿಕವಾಗಿ ನೋಡದೆ ಲೋಕಗ್ರಹಿಕೆಯನ್ನು ವಿಶಾಲವಾಗಿ ಚಿತ್ರಿಸಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಕೆ.ವೈ.ನಾರಾಯಣಸ್ವಾಮಿ ಮಾತನಾಡಿ, ಕನ್ನಡ ಸಾಹಿತ್ಯವನ್ನು ನಾಳೆಗೆ ಸನ್ನದ್ದುಗೊಳಿಸುವ ಅಗತ್ಯ ಮತ್ತು ಆವಶ್ಯಕತೆ ಇದೆ. ಈ ಜವಾಬ್ದಾರಿಯನ್ನು ಯುವ ಸಾಹಿತಿಗಳು ನಿಭಾಯಿಸಬೇಕು. ಲೇಖಕರು ಯಾವುದೇ ಜಾತಿ, ಧರ್ಮ ಮತ್ತು ಪೂರ್ವಗ್ರಹಪೀಡಿತರಾಗಿ ಬರೆಯಬಾರದು ಎಂದು ನುಡಿದರು.
ಹೆಚ್ಚು ಸಾವಯವದಿಂದ ಕೂಡಿರಬೇಕಿದ್ದ ವಿಮರ್ಶೆಗಳು ಇಂದು ಸತ್ವವನ್ನು ಕಳೆದುಕೊಳ್ಳುತ್ತಿವೆ. ಅಲ್ಲದೆ, ಸಮಾಜದಲ್ಲಿ ವಾಗ್ವಾದಗಳನ್ನು ಸೃಷ್ಟಿಸುವಂತಹ ವಿಮರ್ಶೆಗಳು ಇಂದು ಹೆಚ್ಚು ರಚನೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಲೋಕ ಸಂಧಾನ ಮಾಡುವಂತ ವಿಮರ್ಶಾ ಸಂಕಲನಗಳು ಕನ್ನಡ ಸಾಹಿತ್ಯದಲ್ಲಿ ರಚನೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಸಾಹಿತಿ ಡಾ.ವಿಕ್ರಂ ವಿಸಾಜಿ, ಲೇಖಕ ಡಾ.ಸುರೇಶ ನಾಗಲಮಡಿಕೆ, ಪ್ರಕಾಶಕ ಪಲ್ಲವ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News