ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ನಿಧಿಗೆ 10 ಕೋಟಿ ರೂ.: ಸಿಎಂ
ಬೆಂಗಳೂರು, ಎ.2: ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಸೂಕ್ತ ಸೌಲಭ್ಯ ಒದಗಿಸುವ ಹಿನ್ನೆಲೆಯಲ್ಲಿ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ನಿಧಿಗೆ 10 ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಘೋಷಿಸಿದ್ದಾರೆ.
ಶನಿವಾರ ನಗರದ ಕೆಎಸ್‌ಆರ್‌ಪಿ ಪೆರೇಡ್ ಮೈದಾನದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಏರ್ಪಡಿಸಿದ್ದ ‘ಪೊಲೀಸ್ ಧ್ವಜ ದಿನಾಚರಣೆ’ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಶೇ.13 ರಷ್ಟು ಅಧಿಕಾರಿಗಳು, ಶೇ.83 ರಷ್ಟು ಸಿಬ್ಬಂದಿ ವರ್ಗದವರು ಕೆಲಸ ನಿರ್ವಹಿಸುತ್ತಿದ್ದಾರೆ. ಜೊತೆಗೆ 50 ಸಾವಿರಕ್ಕಿಂತ ಹೆಚ್ಚು ನಿವೃತ್ತ ಪೊಲೀಸರಿದ್ದಾರೆ. ಹೀಗಾಗಿ, ಇವರ ಕ್ಷೇಮಾಭಿವೃದ್ಧಿಗಾಗಿ 10 ಕೋಟಿ ರೂ. ನೀಡಲಾಗುವುದು. ಅಲ್ಲದೆ, ನಿವೃತ್ತ ಪೊಲೀಸ್ ಕಲ್ಯಾಣ ನಿಧಿಯ ಸಹಾಯಧನ ಹಿಂದೆ 25 ಸಾವಿರ ರೂ.ಮಾತ್ರವಿತ್ತು. ಇದೀಗ 50 ಸಾವಿರಕ್ಕೆ ಏರಿಸಲಾಗಿದೆ ಎಂದ ಅವರು ಹೇಳಿದರು.
1965ರಲ್ಲಿ ಪೊಲೀಸ್ ಕಾಯ್ದೆ ಜಾರಿಗೆ ಬಂದಿದ್ದು, ಈ ದಿನವನ್ನು ‘ಪೊಲೀಸ್ ಕಲ್ಯಾಣ ದಿನ’ ಎಂದು ಕರೆಯುತ್ತೇವೆ. ಪೊಲೀಸರು ದಿನಪೂರ್ತಿ, ವರ್ಷದ 365 ದಿನಗಳು ಕೂಡ ಬಿಡುವಿಲ್ಲದ ಕೆಲಸ ಮಾಡಬೇಕಾಗುತ್ತದೆ. ಹಬ್ಬ-ಹರಿದಿನ ಸೇರಿ ಯಾವುದೇ ಸಂದರ್ಭದಲ್ಲಿ ಕುಟುಂಬದವರೊಡನೆ ಉಳಿಯಲು ಸಾಧ್ಯವಾಗುವುದಿಲ್ಲ. ಅವರ ಸೇವೆ ಬಹಳ ಕ್ಲಿಷ್ಟಕರವಾಗಿದ್ದು, ಜೀವಕ್ಕೆ ಅಪಾಯ ತರುವಂತಹದ್ದಾಗಿರುತ್ತದೆ. ಆದರೂ, ಕಾನೂನು ಸುವ್ಯವಸ್ಥೆ ಕಾಪಾಡಲು, ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಅವರು ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡ ಬೇಕಾಗುತ್ತದೆ ಎಂದು ನುಡಿದರು.
ದೇಶದಲ್ಲಿ ಹೆಣ್ಣು ಮಕ್ಕಳು ಸರಿರಾತ್ರಿಯಲ್ಲಿ ಒಬ್ಬರೇ ಹೊರಗೆ ಓಡಾಡುವಂತಾಗಬೇಕು. ಅದು ನಿಜವಾದ ಸ್ವಾತಂತ್ರ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಎಲ್ಲೂ ಎಚ್ಚರ ತಪ್ಪದೆ ಪೊಲೀಸ್ ಇಲಾಖೆ ಕೆಲಸ ಮಾಡಬೇಕಾಗುತ್ತದೆ. ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಮೈಯೆಲ್ಲಾ ಕಣ್ಣಾಗಿ, ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಣೆ ಮಾಡಿಕೊಂಡು ಕೆಲಸ ನಿರ್ವಹಿಸಬೇಕು. ನಾಡಿಗಾಗಿ, ನಾಡಿನ ಜನತೆಗಾಗಿ ನಿಷ್ಠೆಯಿಂದ ದುಡಿಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಅಪರಾಧ ನಡೆಯುವ ಮೊದಲೇ ತಡೆಯುವುದು ಬಹಳ ಮುಖ್ಯವಾಗಿದೆ ಎಂದ ಅವರು, ಬೆಂಗಳೂರಿನಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಇದು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅದೇ ರೀತಿ, ಕಾನೂನು ಪಾಲನೆಯಿಂದ ಸಮಾಜದ ನೆಮ್ಮದಿ ಹಾಳು ಮಾಡುವ ಶಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಬಲಿ ಹಾಕುವ ಕೆಲಸ ಆಗಬೇಕೆಂದು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಲತಾ ಕೃಷ್ಣರಾವ್ ಸೇರಿ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಿಎಂ ಪದಕ ನಿರಾಕರಿಸಿದ ಮೃತ ಪೊಲೀಸ್ ಪತ್ನಿ
ಆಂತರಿಕ ಭದ್ರತಾ ವಿಭಾಗದಲ್ಲಿದ್ದ ಚಾಮರಾಜನಗರ ಮೂಲದ ಮಹದೇವಸ್ವಾಮಿ ಕರ್ತವ್ಯ ನಿರ್ವಹಣೆ ವೇಳೆ ಆಕಸ್ಮಿಕ ಗುಂಡು ತಗಲಿ 2015ರ ಜೂನ್‌ನಲ್ಲಿ ಮೃತಪಟ್ಟಿದ್ದರು. ಅವರಿಗೆ ಮರಣೋತ್ತರವಾಗಿ ಮುಖ್ಯಮಂತ್ರಿಯ ಪದಕ ಘೋಷಿಸಲಾಗಿತ್ತು. ಪತಿಯ ಪರವಾಗಿ ಪದಕ ಸ್ವೀಕರಿಸಲು ಅವರ ಪತ್ನಿ ಚೈತ್ರಾ ಅವರು ಆಗಮಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ನೀಡಲು ಹೋದಾಗ ನಿರಾಕರಿಸಿದರು. ವೇದಿಕೆಯಲ್ಲೇ ಮುಖ್ಯಮಂತ್ರಿ, ಗೃಹಸಚಿವರು, ಪೊಲೀಸ್ ಮಹಾನಿರ್ದೇಶಕರು ಸೂಕ್ತ ಪರಿಹಾರ ನೀಡುವ ಭರವಸೆ ನೀಡಿ ಮನವೊಲಿಸಿದ ನಂತರ ಚೈತ್ರಾ ಅವರು ಪದಕ ಪಡೆದುಕೊಂಡರು.