ಕಳಸಾ-ಬಂಡೂರಿ ಜಲವಿವಾದ ಪ್ರಧಾನಿಯೇ ಬಗೆಹರಿಸಲಿ: ಸಿಎಂ
ಬೆಂಗಳೂರು, ಎ.2: ಜನಾದೇಶ ಹಾಗೂ ಅಧಿಕಾರ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ಮಧ್ಯಪ್ರವೇಶಿಸಿ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ನಡುವಿನ ಕಳಸಾ-ಬಂಡೂರಿ ಜಲವಿವಾದವನ್ನು ಬಗೆಹರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಬರದ ಛಾಯೆಯಲ್ಲಿ ಬಳಲುತ್ತಿರುವ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿದರು.
ಕುಡಿಯುವ ನೀರಿಗಾಗಿ ಮಹದಾಯಿ ಕಣಿವೆಯಿಂದ ಮಲಪ್ರಭಾ ಜಲಾಶಯಕ್ಕೆ ಯೋಜಿಸಿರುವಂತೆ ನೀರನ್ನು ತಿರುವುಗೊಳಿಸಲು ಅನುವಾಗುವಂತೆ ಮಧ್ಯೆ ಪ್ರವೇಶಿಸಿ ಜಲ ವಿವಾದವನ್ನು ಬಗೆಹರಿಸಬೇಕೆಂದು ಪ್ರಧಾನಿ ಮೋದಿಯವರನ್ನು ಕೋರಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಶಾಸನ ಸಭೆಯ ಈ ನಿರ್ಣಯದಿಂದ ಹಿಂದೆ ಸರಿಯಲು ಸಾಧ್ಯವಾಗದು. ಮಹದಾಯಿ ನದಿಯಿಂದ ಮಲಪ್ರಭಾ ಜಲಾನಯನ ಪ್ರದೇಶದ ಕಳಸಾ-ಬಂಡೂರಿ ನಾಲಾ ಯೋಜನೆಯ ಮೂಲಕ 7.56ಟಿಎಂಸಿ ಕುಡಿಯುವ ನೀರು ಒದಗಿಸುವ ಈ ಯೋಜನೆಗೆ ಮಾನವೀಯತೆಯ ದೃಷ್ಟಿಯಿಂದ ಹಸಿರು ನಿಶಾನೆ ದೊರಕಿಸಿಕೊಡಲು ಪ್ರಧಾನಿ ಮುಂದಾಗಬೇಕು ಎಂದು ಆಗ್ರಹಿಸಿದರು.
ಅಂತಾರಾಜ್ಯ ಜಲ ವಿವಾದವನ್ನು ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ತಮ್ಮ ನೇತೃತ್ವದಲ್ಲಿ ಆ.24ರಂದು ಹೊಸದಿಲ್ಲಿಗೆ ತೆರಳಿದ್ದ ಸರ್ವಪಕ್ಷ ನಿಯೋಗಕ್ಕೆ ಪ್ರಧಾನಿಗೆ ಮನವಿ ಸಲ್ಲಿಸಿದ ವೇಳೆ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಿಎಂ ಜೊತೆಗೆ ಅಲ್ಲಿನ ವಿಪಕ್ಷಗಳ ಮನವೊಲಿಸಿ ತಮ್ಮಲ್ಲಿಗೆ ಬರುವಂತೆ ಹೇಳಿದ್ದರು. ಆ ಮಾತುಗಳನ್ನು ಒಪ್ಪಲಾಗದು. ಒಕ್ಕೂಟದ ವ್ಯವಸ್ಥೆಯಲ್ಲಿ ಪ್ರಧಾನಿ ಸಭೆಗೆ ಆಮಂತ್ರಿಸಿದರೆ ಯಾವುದೇ ರಾಜ್ಯದ ಮುಖ್ಯಮಂತ್ರಿ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ತಾವು ಕರೆದ ಸಭೆಗೆ ಸ್ಥಳೀಯ ವಿಪಕ್ಷಗಳು ಸ್ಪಂದಿಸಿದಂತೆ ಗೋವಾ ಮತ್ತು ಮಹಾರಾಷ್ಟ್ರಗಳಲ್ಲೂ ಅಲ್ಲಿನ ಸಿಎಂ ಕರೆಯುವ ಸಭೆಯಲ್ಲಿ ಅಲ್ಲಿನ ವಿಪಕ್ಷಗಳು ಭಾಗವಹಿಸುತ್ತವೆ.
ಪ್ರತಿವರ್ಷವೂ ಕರ್ನಾಟಕ ಪಾತ್ರದಲ್ಲಿನ 45 ಟಿಎಂಸಿ ಒಳಗೊಂಡಂತೆ ಮಹದಾಯಿ ನದಿಯಿಂದ 220ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗಿ ವ್ಯರ್ಥವಾಗುತ್ತಿದೆ. ಇದು ಪ್ರತಿಯೊಬ್ಬರ ಆವಶ್ಯಕತೆ ಮಾತ್ರವಲ್ಲ, ಮೂಲಭೂತ ಹಕ್ಕು ಎನಿಸಿರುವ ಕುಡಿಯುವ ನೀರಿಗಾಗಿ ಕೇವಲ 7.56 ಟಿಎಂಸಿ ನೀರು ಒದಗಿಸಬೇಕೆಂಬ ಬೇಡಿಕೆಗೆ ಪ್ರಧಾನಿ ಆದ್ಯತೆಯ ಮೇರೆಗೆ ಸ್ಪಂದಿಸಬೇಕು ಎಂದರು.
ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಲಹೆ ಗೌರವಿಸಿ ಮಹದಾಯಿ ಜಲ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಗೋವಾ ಸಿಎಂಗೆ ಬರೆದ ಪತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ. ಪ್ರಕರಣವು ನ್ಯಾಯಾಧಿಕರಣದಲ್ಲಿ ಇರುವ ಹಿನ್ನೆಲೆಯಲ್ಲಿ ಪ್ರಕರಣವು ಅಲ್ಲೇ ಇತ್ಯರ್ಥವಾಗಬೇಕೆಂದು ಅವರು ಉತ್ತರಿಸಿದ್ದಾರೆ.
ಅಂತೆಯೇ, ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಅವರೂ ಪ್ರಕರಣವು ನ್ಯಾಯಾಧಿಕರಣದಲ್ಲಿ ಇರುವಾಗ ಕೇಂದ್ರ ಸರಕಾರವು ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದು ರಾಜ್ಯ ಸರಕಾರದ ಪತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ವಿಷಯವು ನ್ಯಾಯಾಧಿಕರಣದಲ್ಲಿ ವಿಚಾರಣಾ ಹಂತದಲ್ಲಿದ್ದರೂ, ಸಂಧಾನಕ್ಕೆ ಕಾನೂನು ತೊಡಕುಗಳಿಲ್ಲ ಎಂದರು.
ರಾಜೀನಾಮೆ ನೀಡಲು ಮುಂದಾದ ಶಾಸಕ!
ಈ ಮುನ್ನ ನಡೆದ ಸಭೆಯಲ್ಲಿ ರೋಣ ಶಾಸಕ ಜಿ.ಎಸ್.ಪಾಟೀಲ್ ಮಾತನಾಡಿ, ಸಮಸ್ಯೆ ಬಗೆಹರಿಸಲು ಗಡುವು ನಿಗದಿಪಡಿಸಿ. ನಿಗದಿಪಡಿಸಿದ ಗಡುವಿನೊಳಗೆ ಸಮಸ್ಯೆ ಬಗೆಹರಿಯದಿದ್ದಲ್ಲಿ ತಾನು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭಾವುಕರಾಗಿ ನುಡಿದರು. ಕೇಂದ್ರ ಸಚಿವರಾದ ಅನಂತ ಕುಮಾರ್ ಹಾಗೂ ಡಿ.ವಿ.ಸದಾನಂದ ಗೌಡ, ರಾಜ್ಯದ ನೆಲ-ಜಲ ಮತ್ತು ಭಾಷೆಯ ವಿಚಾರದಲ್ಲಿ ನಾವೆಲ್ಲರೂ ಒಂದೇ ಎಂದು ಸಭೆಯಲ್ಲಿ ತಿಳಿಸಿದಲ್ಲದೆ, ರಾಜ್ಯ ಸರಕಾರಕ್ಕೆ ತಮ್ಮ ಸಂಪೂರ್ಣ ಸಹಕಾರವನ್ನು ಘೋಷಿಸಿದರು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಹದಾಯಿ ಯೋಜನೆಯ ವ್ಯಾಪ್ತಿಗೊಳಪಡುವ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಮಾತ್ರವಲ್ಲದೆ, ಅಲ್ಲಿನ ವಿಪಕ್ಷಗಳ ಮುಖಂಡರ ಮನವೋಲಿಸಿದಲ್ಲಿ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡು ಹಿಡಿಯಬಹುದು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಕೇಂದ್ರ ಸಚಿವರಾದ ಅನಂತ ಕುಮಾರ್, ಜಿ.ಎಂ.ಸಿದ್ದೇಶ್, ಡಿ.ವಿ. ಸದಾನಂದಗೌಡ, ಸಚಿವರಾದ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಜಯಚಂದ್ರ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಉಭಯ ಸದನಗಳ ವಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಶಾಸಕ ಕೋನರೆಡ್ಡಿ ಸೇರಿದಂತೆ ಸಂಸದರು, ಆ ಭಾಗದ ಶಾಸಕರು, ರೈತ ಮುಖಂಡರು, ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮಿ, ರೇವಣ್ಣ ಸಿದ್ದೇಶ್ವರ ಮಠದ ಶ್ರೀ ಬಸವರಾಜ ದೇವರು ಸ್ವಾಮಿ, ಪುರುಷೊತ್ತಮಾನಂದ ಸ್ವಾಮಿ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.
ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ನಾಲ್ಕೈದು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸುವ ಕಳಸಾ-ಬಂಡೂರಿ ನಾಲೆ ಯೋಜನೆ ವಿವಾದ ಬಗೆಹರಿಸುವಂತೆ ಕೋರಿ ಪ್ರಧಾನಿಯವರ ಬಳಿಗೆ ಮತ್ತೊಮ್ಮೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಸರ್ವಪಕ್ಷದೊಂದಿಗೆ ಪ್ರಧಾನಿ ಭೇಟಿಗೆ ಬಿಜೆಪಿ ತೆರಳಲಿದೆ. ಪ್ರಧಾನಿ ಮಧ್ಯಸ್ಥಿಕೆಗೆ ಸೂಕ್ತ ವೇದಿಕೆ ಸಿದ್ಧಪಡಿಸುವ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಗೋವಾ ಕಾಂಗ್ರೆಸ್ ಮುಖಂಡರ ಮನವೊಲಿಸಬೇಕು. ಆದರೂ, ಬಿಜೆಪಿ ಈ ವಿಚಾರದ ಇತ್ಯರ್ಥಕ್ಕೆ ಪಕ್ಷದ ಮಟ್ಟದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.
- ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ