×
Ad

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯ ಮಾಪನ ಬಹಿಷ್ಕಾರ

Update: 2016-04-03 21:54 IST

ಮಡಿಕೇರಿ, ಎ.3: ಸತತ ಎರಡು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣದಿಂದ ಗೊಂದಲದಲ್ಲಿ ಸಿಲುಕಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇದೀಗ ಉಪನ್ಯಾಸಕರ ಪ್ರತಿಭಟನೆಯ ಕಾವನ್ನು ಕೂಡ ಎದುರಿಸಬೇಕಾಗಿದೆ. ವೇತನ ತಾರತಮ್ಯ ನಿವಾರಣೆಗಾಗಿ ಒತ್ತಾಯಿಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಬಹಿಷ್ಕರಿಸಿರುವ ಉಪನ್ಯಾಸಕರೊಂದಿಗೆ ಎ.1ರಂದು ಮುಖ್ಯಮಂತ್ರಿಗಳು ನಡೆಸಿದ ಸಂಧಾನ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರಿದಿದೆ. ಎ.5 ಮೌಲ್ಯ ಮಾಪನದ ಆರಂಭದ ದಿನವಾದರೂ ಎ.3 ಮತ್ತು 4ರಂದು ಉತ್ತರ ಪತ್ರಿಕೆಗಳ ಕೋಡಿಂಗ್, ಡೀಕೋಡಿಂಗ್ ಪ್ರಕ್ರಿಯೆ ರಾಜ್ಯದ ಎಲ್ಲ 46 ಮೌಲ್ಯ ಮಾಪನ ಕೇಂದ್ರಗಳಲ್ಲಿ ನಡೆಯಬೇಕಾಗಿತ್ತು. ಆದರೆ ಉಪನ್ಯಾಸಕರು ಬೆಂಗಳೂರಿನ ಫ್ರೀಡಂ ಪಾರ್ಕ್ ಎದುರು ಪ್ರತಿಭಟನಾ ನಿರತರಾಗಿರುವುದರಿಂದ ಮೌಲ್ಯಮಾಪನದ ಪ್ರಕ್ರಿಯೆಗೆ ಚಾಲನೆಯೇ ದೊರೆತ್ತಿಲ್ಲ.

ಕೊಡಗು, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮೌಲ್ಯ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇಲ್ಲೂ ಕೂಡ ಉಪನ್ಯಾಸಕರು ಹಾಜರಾಗದೆ ಮುಷ್ಕರದ ಬಿಸಿ ತಟ್ಟಿದೆ. ಕೊಡಗಿನ ಉಪನ್ಯಾಸಕರ ಬೆಂಬಲ:

ಕೊಡಗು ಜಿಲ್ಲೆಯಲ್ಲಿರುವ ಸುಮಾರು 250 ಕ್ಕೂ ಅಧಿಕ ಉಪನ್ಯಾಸಕರು ಮೌಲ್ಯಮಾಪನವನ್ನು ಬಹಿಷ್ಕರಿಸಿದ್ದಾರೆ. ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು, ವೇತನ ತಾರತಮ್ಯ ನಿವಾರಣೆಗಾಗಿ ಜಿ. ಕುಮಾರ್ ನಾಯಕ್ ವರದಿಯ ಅನುಷ್ಠಾನಕ್ಕೆ ಒತ್ತಾಯಿಸಿ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸುವ ನಿರ್ಧಾರದಿಂದ ಉಪನ್ಯಾಸಕರು ಹಿಂದೆ ಸರಿಯುವುದಿಲ್ಲವೆಂದು ಜಿಲ್ಲಾ ಉಪನ್ಯಾಸಕರ ಸಂಘದ ಖಜಾಂಚಿ ಹೇಮಂತ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣ ಸಚಿವರು ಸೆಪ್ಟಂಬರ್ ತಿಂಗಳಿನಲ್ಲಿ ವೇತನ ಹೆಚ್ಚಳದ ಬಗ್ಗೆ ಭರವಸೆ ನೀಡಿದ್ದಾರೆಯಾದರೂ ಈ ರೀತಿಯ ಅನೇಕ ಭರವಸೆಗಳು ಈ ಹಿಂದೆ ಈಡೇರದ ಕಾರಣ ರಾಜ್ಯ ಸಂಘದ ನಿರ್ಧಾರದಂತೆ ಮುಷ್ಕರವನ್ನು ಮುಂದುವರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ತೊಡಕುಸಿಇಟಿ ಆಕಾಂಕ್ಷಿಗಳಿಗೆ ತೊಡಕು:

ಒಟ್ಟಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಪರೀಕ್ಷೆಯೂ ವಿಳಂಬವಾಗುತ್ತಿರುವುದಲ್ಲದೆ, ಇದೀಗ ಉಪನ್ಯಾಸಕರ ಮುಷ್ಕರದಿಂದಾಗಿ ಫಲಿತಾಂಶ ಪ್ರಕಟವೂ ತಡವಾಗುವುದರಿಂದ ಸಿಇಟಿ ಆಕಾಂಕ್ಷಿಗಳಿಗೆ ತೊಡಕಾಗಲಿದೆ. ಈ ಬೆಳವಣಿಗೆಯಿಂದ ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರು ಕೂಡ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News