×
Ad

ಬೆಂಕಿ ನಂದಿಸಲು ಅರಣ್ಯ ಇಲಾಖೆಯಿಂದ ಹರಸಾಹಸ

Update: 2016-04-03 21:57 IST

ಶಿರಸಿ, ಎ.3: ಕಾಡಿಗೆ ಬೆಂಕಿ ಬಿದ್ದು ಅಪಾರ ಸಂಪತ್ತು ನಾಶವಾದ ಘಟನೆ ತಾಲೂಕಿನ ಹೆಬ್ಬಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅರಣ್ಯ ಸಿಬ್ಬಂದಿ ಎರಡು-ಮೂರು ದಿನಗಳಿಂದ ಹರ ಸಾಹಸ ಪಟ್ಟು ಬೆಂಕಿ ನಂದಿಸಲು ಪ್ರಯತ್ನ ಮಾಡುತ್ತಿದ್ದರೂ, ಬೆಂಕಿ ಹತೋಟಿಗೆ ಬಾರದೆ ಇರುವುದರಿಂದ ಅರಣ್ಯ ಇಲಾಖೆಯ ನಿದ್ದೆಗೆಡಿಸಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಕಳೆದ ಮೂರು ದಿನಗಳಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ. ಶಿರಸಿಯ ಬಿಲ್ಲಕೊಪ್ಪಗ್ರಾಪಂ ವ್ಯಾಪ್ತಿಯ ಕುಪ್ಪಳ್ಳಿ ಹೆಬ್ಬಳ್ಳಿ ಹಾಗೂ ಉಂಡಾಡಿ ಕಟ್ಟೆ ಅರಣ್ಯ ಭಾಗದಲ್ಲಿ ಕಿಡಿಗೇಡಿಗಳು ಅರಣ್ಯಕೆ ಬೆಂಕಿ ಇಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಿಜವಾಗಿ ಯಾರು ಬೆಂಕಿ ಇಡುತ್ತಿದ್ದಾರೆ ಎಂಬುದು ತಿಳಿದು ಬರಬೇಕಿದೆ. ಆಯಾ ಅರಣ್ಯ ಪ್ರದೇಶದ ಹಿರಿಯ ಅಧಿಕಾರಿಗಳು ಹದ್ದಿನಕಣ್ಣು ಇಡುವುದು ಅವಶ್ಯವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ

   ಬೋರನಗುಡ್ಡ ಭಾಗದಲ್ಲಿ ಒಂದು ಎಕರೆಗೂ ಅಧಿಕ ಅರಣ್ಯ ಸಂಪತ್ತು ಬೆಂಕಿಗೆ ನಾಶವಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಒಣಗಿ ನಿಂತ ಬಿದಿರುಗಳು ಬೆಂಕಿಗೆ ಹೊತ್ತಿ ಉರಿಯುತ್ತಿದ್ದು, ಇದರಿಂದ ಸುತ್ತಮುತ್ತಲ ಬೆಲೆ ಬಾಳುವ ಮರಗಳು, ಅಕೇಶಿಯಾ ಮರಗಳು ಸುಟ್ಟು ಧರೆಗುರುಳುತ್ತಿವೆ ಎಂದು ಹೇಳಲಾಗುತ್ತಿದೆ . ಕಾಡಿಗೆ ಆವರಿಸಿದ ಬೆಂಕಿಯು ಶನಿವಾರ ಕುಪ್ಪಳ್ಳಿ ಮುಖ್ಯ ರಸ್ತೆ ಅಕ್ಕಪಕ್ಕದಲ್ಲಿ ಆವರಿಸಿ ಆತಂಕಕ್ಕೆ ಕಾರಣವಾಗಿದೆ. ಇಡೀ ಕಾಡು ತರಗಲೆಗಳಿಂದ ತುಂಬಿರುವ ಸಂದರ್ಭದಲ್ಲಿ ಬೆಂಕಿಯ ಕೆನ್ನಾಲಗೆ ಇತರೆಡೆ ಪಸರಿಸುತ್ತಿರುವುದರಿಂದ ಸ್ಥಳೀಯರ ಆತಂಕ ಹೆಚ್ಚಿಸಿದೆ. ಕಾಂಡಂಚಿನ ಪ್ರದೇಶದಲ್ಲಿ ಹುಲ್ಲುಗಾವಲು ಪ್ರದೇಶವಿರುವ ಕಾರಣ ರೈತರು ಇನ್ನಷ್ಟು ಚಿಂತೆಗೆ ಬೀಳುವಂತೆ ಮಾಡಿದೆ.

ಸರಕಾರದಿಂದ ಅರಣ್ಯ ಇಲಾಖೆಗೆ ಅರಣ್ಯ ನಿರ್ವಹಣೆಗೆ ಅನುದಾನ ಬರುತ್ತಿದೆ. ಇಲಾಖೆಯು ಬೇಸಿಗೆ ಕಾಲದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಒಣಗಿದ ಹುಲ್ಲು, ಎಲೆ ತೆರವು ಮಾಡಿ ವಿಲೇವಾರಿ ಮಾಡುವುದು ಅವಶ್ಯವಾಗಿದೆ. ಅರಣ್ಯ ಇಲಾಖೆ ತನ್ನ ತಪ್ಪನ್ನು ಮರೆಮಾಚಲು ಕಿಡಿಗೇಡಿಗಳ ಮೇಲೆ ಹಾಕುತ್ತಿದೆ. ಬೇಸಿಗೆ ಕಾಲದಲ್ಲಿ ಕಾಡಿನ ಕುರಿತು ಇಲಾಖೆ ಮುತುವರ್ಜಿ ವಹಿಸುವುದು ಅವಶ್ಯವಾಗಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News