ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದು ಕಾಂಗ್ರೆಸಿಗರಿಗೆ ಭೂಷಣವಲ್ಲ: ಕುರುಂಬಯ್ಯ
ವೀರಾಜಪೇಟೆ, ಎ.3: ಪಕ್ಷದ ಎಲ್ಲ ಸೌಲಭ್ಯಗಳನ್ನು ಪಡೆಯುವುದರ ಮೂಲಕ ವಿವಿಧ ಹುದ್ದೆಗಳನ್ನು ಅಲಂಕರಿಸಿದವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದು ಕಾಂಗ್ರೆಸಿಗರಿಗೆ ಭೂಷಣವಲ್ಲ ಎಂದು ಕೊಡಗಿನ ಹಿರಿಯ ಕಾಂಗ್ರೆಸಿಗ ಜೆ.ಎ.ಕರುಂಬಯ್ಯ ಹೇಳಿದ್ದಾರೆ.
ಅವರು ಇಂದು ವೀರಾಜಪೇಟೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಅವರು ಮುಂದುವರಿಯುತ್ತಾ, ಕಾಂಗ್ರೆಸ್ ಪಕ್ಷ 130ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಪಕ್ಷವಾಗಿದೆ. ಪಕ್ಷದ ಕಾರ್ಯಕರ್ತರ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾಗುವುದು ಸಹಜ. ಆದರೆ ಅವುಗಳನ್ನು ಪರಿಹರಿಸಲು ಸೂಕ್ತವಾದ ವೇದಿಕೆಯನ್ನೇ ಬಳಸಬೇಕು. ಕಾರ್ಯಕರ್ತರಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟಾಗುವ ಹೇಳಿಕೆಗಳನ್ನು ನೀಡುವುದನ್ನು ಕಾರ್ಯಕರ್ತರು ತೊರೆಯಬೇಕು ಎಂದು ಹೇಳಿದರು. ಪಕ್ಷದ ಮಾಜಿ ಜಿಲ್ಲಾ ಅಧ್ಯಕ್ಷ ಬಿ.ಟಿ.ಪ್ರದೀಪ್ ಮಾತನಾಡಿ, ಪಕ್ಷದ ಕಾರ್ಯಕರ್ತರ ನಡುವೆ ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ಬಗೆಹರಿಸಿಕೊಂಡು ಪಕ್ಷದ ಸಂಘಟನೆಗೆ ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಕಾರ್ಯನಿರ್ವಹಿಸಬೇಕು. ಮುಖ್ಯ ಮಂತ್ರಿಗಳು ಕಳೆದ ಮೂರು ವರ್ಷಗಳಲ್ಲಿ ವಿಶೇಷ ಪ್ಯಾಕೇಜ್‌ನಲ್ಲಿ 150 ಕೋಟಿ ರೂ. ನೀಡಿ ಕೊಡಗಿನ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಪಕ್ಷದ ತತ್ವ ಸಿದ್ಧಾಂತದ ಆಧಾರದ ಮೇಲೆ ಅರ್ಹರನ್ನು ಪಕ್ಷದ ವಿವಿಧ ಸ್ಥಾನಗಳಿಗೆ ಆಯ್ಕೆ ಮಾಡಲಾಗಿದೆ. ವರಿಷ್ಠರು ಪಕ್ಷದ ಸ್ಥಾನಗಳಿಗೆ ಅರ್ಹ ಹಾಗೂ ಸೂಕ್ತ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಿರುವುದನ್ನು ಕಾರ್ಯಕರ್ತರು ಬೆಂಬಲಿಸಬೇಕು ಎಂದು ಹೇಳಿದರು. ಸಮಾರಂಭದಲ್ಲಿ ಪಕ್ಷದ ಹಿರಿಯ ಸದಸ್ಯರುಗಳು, ಜಿಲ್ಲಾ ನಾಯಕರುಗಳು ವೀರಾಜಪೇಟೆ ಬ್ಲಾಕ್‌ನ ನೂತನ ಅಧ್ಯಕ್ಷ ಅಬ್ದುಸ್ಸಲಾಂರವರಿಗೆ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅಬ್ದುಸ್ಸಲಾಂ, ಪಕ್ಷದ ತತ್ವ ಸಿದ್ದಾಂತಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಬಲಿಷ್ಠ ಸಂಘಟನೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಹೇಳಿದರು. ಸಭೆಯನ್ನು ಉದ್ದೇಶಿಸಿ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ವಿ.ಕೆ.ಸತೀಶ್ ಕುಮಾರ್ ಮಾತನಾಡಿದರು. ಮಾಜಿ ಅಧ್ಯಕ್ಷ ಕೆ.ಉಸ್ಮಾನ್ ಹಾಜಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬ್ಲಾಕ್ ಉಪಾಧ್ಯಕ್ಷ ಮಾಳೇಟಿರ ಬೆಲ್ಲು ಬೋಪಯ್ಯ, ಸೇವಾದಳದ ಜಿಲ್ಲಾಧ್ಯಕ್ಷ ಸಿ.ಪಿ.ಕಾವೇರಪ್ಪ, ಕಾರ್ಯಾಧ್ಯಕ್ಷ ಎಂ.ಎಸ್. ವೆಂಕಟೇಶ್, ಸೇವಾದಳದ ಶರಣು ನಂಜಪ್ಪ, ಬೇಟೋಳಿ ಗ್ರಾಪಂ ಅಧ್ಯಕ್ಷೆ ಚೋಂದಮ್ಮ, ಆರ್ಜಿ ಗ್ರಾಪಂ ಅಧ್ಯಕ್ಷೆ ಗಾಯಿತ್ರಿ, ನಗರ ಸಮಿತಿಯ ಮಾಜಿ ಅಧ್ಯಕ್ಷ ಮಾಳೇಟಿರ ಬೋಪಣ್ಣ, ರತಿ ಬಿದ್ದಪ್ಪ, ಶೀಬಾ ಪೃಥ್ವಿನಾಥ್, ಪಿ.ಕೆ.ಪೊನ್ನಪ್ಪ, ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಅಪ್ಪಣ್ಣ, ಮಹಿಳಾ ವಿಭಾಗದ ರಾಣು ಮಂದಣ್ಣ ಮತ್ತಿತರರು ಉಪಸ್ಥಿತರಿದ್ದರು. ಪಕ್ಷದ ಹಿರಿಯ ಸದಸ್ಯ ಮಾದಂಡ.ಎಸ್.ಪೂವಯ್ಯ ಸ್ವಾಗತಿಸಿದರು. ಕೆ.ಎಸ್.ಗೋಪಾಲಕೃಷ್ಣ ನಿರೂಪಿಸಿದರು. ಸಿ.ಕೆ. ಪೃಥ್ವಿನಾಥ್ ವಂದಿಸಿದರು