ಪಿಯು ಉತ್ತರ ಪತ್ರಿಕೆ ವೌಲ್ಯಮಾಪನ ಸ್ಥಗಿತ
ಆತಂಕದಲ್ಲಿ ವಿದ್ಯಾರ್ಥಿಗಳು
ಬೆಂಗಳೂರು, ಎ. 3: ದ್ವಿತೀಯ ಪಿಯುಸಿಪರೀಕ್ಷೆಯ ಉತ್ತರ ಪತ್ರಿಕೆಗಳ ವೌಲ್ಯಮಾಪನ ದಿಂದ ಪದವಿಪೂರ್ವ ಕಾಲೇಜು ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ಸಂಘ ಹಿಂದಕ್ಕೆ ಸರಿದಿರುವುದರಿಂದ, ವಿದ್ಯಾರ್ಥಿಗಳು ಮತ್ತೆ ಆತಂಕಕ್ಕೆ ಒಳಗಾಗುವಂತಾಗಿದೆ.
ಪದವಿಪೂರ್ವ ಶಿಕ್ಷಣ ಮಂಡಳಿಯು ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ವೌಲ್ಯಮಾಪನ ಆರಂಭಿಸಲು ನಿರ್ಧರಿಸಿದ್ದು, ವೌಲ್ಯಮಾಪನ ಪ್ರಕ್ರಿಯೆಲ್ಲಿ ಪಾಲ್ಗೊಳ್ಳುವಂತೆ ಉಪನ್ಯಾಸಕರಿಗೆ ಆದೇಶ ನೀಡಿತ್ತು.
ಆದರೆ, ತಮ್ಮ ಬೇಡಿಕೆಗಳು ಈಡೇರಿಸುವವರೆಗೆ ಯಾವುದೇ ಕಾರಣಕ್ಕೂ ವೌಲ್ಯಮಾಪನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಉಪನ್ಯಾಸಕರು ಪಟ್ಟು ಹಿಡಿದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ಬೆಂಗಳೂರು, ಮಂಗಳೂರು ಹಾಗೂ ಮೈಸೂರು ಸೇರಿದಂತೆ ಒಟ್ಟು 45 ಕೇಂದ್ರಗಳಲ್ಲಿ ಇಂದಿನಿಂದ ಪಿಯು ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆ ವೌಲ್ಯಮಾಪನ ಪ್ರಾರಂಭವಾಗಬೇಕಾಗಿತ್ತು. ಅಲ್ಲದೆ, ಒಂದು ವೌಲ್ಯಮಾಪನ ಕೇಂದ್ರ ದಲ್ಲಿ 600ಕ್ಕಿಂತ ಹೆಚ್ಚು ಉಪನ್ಯಾಸಕರು ಹಾಜರಾಗುತ್ತಾರೆ. ಆದರೆ, ಈ ಬಾರಿ ಒಬ್ಬರೂ ವೌಲ್ಯಮಾಪನ ಕೇಂದ್ರಕ್ಕೆ ಹಾಜರಾಗಿಲ್ಲ ಎಂದು ವರದಿ ಯಾಗಿದೆ.
ನಗರದ ಫ್ರೀಡಂ ಪಾರ್ಕ್‌ನಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾತನಾಡಿ, ಪಿಯು ಉಪನ್ಯಾಸಕರು ವೇತನ ತಾರತಮ್ಯ ನಿವಾರಣೆಗಾಗಿ 1998ರಿಂದಲೂ ಹೋರಾಟಗಳನ್ನು ನಡೆಸುತ್ತಿದ್ದಾರೆ. ಆದರೆ, ಇದುವರೆಗೂ ರಾಜ್ಯ ಸರಕಾರ ಯಾವುದೇ ಸಮಸ್ಯೆಗೆ ಸೂಕ್ತ ಪರಿಹಾರ ನೀಡದೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎ.1ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಸಿದ ಸಭೆಯೂ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರು ವೌಲ್ಯಮಾಪನ ವನ್ನು ಬಹಿಷ್ಕರಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇತನ ತಾರತಮ್ಯ ನಿವಾರಣೆಗೆ ಜಿ.ಕುಮಾರ್‌ನಾಯ್ಕಾ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ವರದಿಯನ್ನು ಸಲ್ಲಿಸಿ, ನಾಲ್ಕು ವರ್ಷಗಳು ಕಳೆದಿದ್ದರೂ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಸಾಲಿನಲ್ಲಿ ವರದಿಯನ್ನು ಅನುಷ್ಠಾನಗೊಳಿಸಬೇಕು ಹಾಗೂ ವೇತನ ಹೆಚ್ಚಳಗೊಳಿಸುವರೆಗೂ ಉತ್ತರ ಪತ್ರಿಕೆಗಳ ವೌಲ್ಯಮಾಪನಕ್ಕೆ ಮುಂದಾಗುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ದ್ವೀತಿಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಗೊಂದಲಕ್ಕೆ ತೇಪೆ ಹಾಕುವ ಕಾರ್ಯದಲ್ಲಿ ನಿರತರಾಗಿರುವ ಪಿಯು ಮಂಡಳಿ ಅಧಿಕಾರಿಗಳು ಇಂದು ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಲಿದೆ ಎನ್ನುವ ವಿಷಯವನ್ನೇ ಮರೆತ್ತಿದ್ದಾರೆ.
- ತಿಮ್ಮಯ್ಯ ಪುರ್ಲೆ, ಅಧ್ಯಕ್ಷ, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ.