ಯುವತಿ ಸಾವು; ಮರ್ಯಾದೆ ಹತ್ಯೆ ಶಂಕೆ
ಪೋಷಕರ ಬಂಧನ; ಠಾಣೆಗೆ ಗ್ರಾಮಸ್ಥರ ಮುತ್ತಿಗೆ
ಮಂಡ್ಯ, ಎ.3: ಜಿಲ್ಲೆಯಲ್ಲಿ ಯುವತಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದು, ಇದು ಮರ್ಯಾದೆ ಹತ್ಯೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಯುವತಿಯ ಪೋಷಕರನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ತಾಲೂಕಿನ ತಿಮ್ಮನ ಹೊಸೂರು ಗ್ರಾಮದ ಮೋಹನ್-ಭಾಗ್ಯ ದಂಪತಿ ಪುತ್ರಿ ಮೋನಿಕಾ ನಿಗೂಢವಾಗಿ ಸಾವನ್ನಪ್ಪಿದ ಯುವತಿಯಾಗಿದ್ದು, ಈಕೆಯ ಮೃತದೇಹವನ್ನು ರವಿವಾರ ಬೆಳಗಿನ ಜಾವ ತರಾತುರಿಯಲ್ಲಿ ಸುಟ್ಟು ಹಾಕಿರುವುದು ಸಂಶಯಕ್ಕೀಡು ವಾಡಿದೆ.
ಘಟನೆ ಹಿನ್ನೆಲೆ: ತಿಮ್ಮನ ಹೊಸೂರಿನ ಮೋನಿಕಾ ಮಂಡ್ಯದ ವಕೀಲರಾಗಿರುವ ಸೋದರಮಾವ ಸುರೇಶ್ ಎಂಬವರ ಮನೆಯಲ್ಲಿ ಇದ್ದುಕೊಂಡು ವಿಶ್ವಮಾನವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (ವಿಜ್ಞಾನ) ಓದುತ್ತಿದ್ದರು.
ಈ ನಡುವೆ ಮೋನಿಕಾ ಮತ್ತು ದಲಿತ ಯುವಕ ನರೇಂದ್ರಬಾಬು ಎಂಬವರು ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರೂ ಓಡಿ ಹೋಗಿ ಮದುವೆಯಾಗಿದ್ದರೆಂದು ತಿಳಿದುಬಂದಿದೆ. ಅನಂತರ, ಮೋನಿಕಾ ಕಾಣೆಯಾಗಿದ್ದಾರೆಂದು ಆಕೆಯ ಪೋಷಕರು ಮಂಡ್ಯ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಮೋನಿಕಾ ಮತ್ತು ನರೇಂದ್ರಬಾಬುವನ್ನು ಪೊಲೀಸರು ಪತ್ತೆಹಚ್ಚಿ ಕಳೆದ ಬುಧವಾರ ಠಾಣೆಗೆ ಕರೆತಂದು ಮುಚ್ಚಳಿಕೆ ಬರೆಸಿಕೊಂಡು ಮೋನಿಕಾರನ್ನು ಪೋಷಕರ ವಶಕ್ಕೆ ಒಪ್ಪಿಸಿದರೆಂದು ಹೇಳಲಾಗಿದೆ. ಪೋಷಕರ ಜತೆಯಲ್ಲಿದ್ದ ಮೋನಿಕಾ ಶನಿವಾರ ನಿಗೂಢವಾಗಿ ಸಾವನ್ನಪ್ಪಿದ್ದು, ಪೋಷಕರು ರವಿವಾರ ಬೆಳಗಿನ ಜಾವ ತಮ್ಮ ಕಬ್ಬಿನಗದ್ದೆ ಮಧ್ಯೆ ಶವಸಂಸ್ಕಾರ ನೆರವೇರಿಸಿಬಿಟ್ಟಿದ್ದಾರೆ. ತರಾತುರಿಯಲ್ಲಿ ಮೋನಿಕಾರ ಶವಸಂಸ್ಕಾರ ನಡೆಸಿರುವ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು, ರವಿವಾರ ಬೆಳಗ್ಗೆ ಆಕೆಯ ಪೋಷಕರನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದರು.
ಈ ವಿಷಯ ತಿಳಿಯುತ್ತಿದ್ದಂತೆ ಠಾಣೆಗೆ ಮುತ್ತಿಗೆಹಾಕಿದ ತಿಮ್ಮನಹೊಸೂರು ಗ್ರಾಮಸ್ಥರು, ಮೋನಿಕಾ ಪೋಷಕರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿದರು. ತಮ್ಮ ಮಗಳು ಮೋನಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗ್ರಾಮದಲ್ಲಿ ಹಬ್ಬವಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸಲಹೆ ಮೇರೆಗೆ ತರಾತುರಿಯಲ್ಲಿ ಶವಸಂಸ್ಕಾರ ನಡೆಸಿದೆವು. ತಾವು ಆಕೆಯ ಕೊಲೆ ಮಾಡಿಲ್ಲ ಎಂದು ಮೋನಿಕಾ ಪೋಷಕರು ಹೇಳಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.