ಕ್ರಿಯಾಶೀಲ ಪೊಲೀಸರಿಗೆ ನಗದು ಪುರಸ್ಕಾರ
ಶಿವಮೊಗ್ಗ,ಎ.3: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ದಕ್ಷತೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿ-ಸಿಬ್ಬಂದಿಯನ್ನು ಪ್ರತೀ ತಿಂಗಳು ಗುರುತಿಸುವ ಮೂಲಕ ಪ್ರಸಕ್ತ ಮಾಹೆಯಿಂದಲೇ ಅನ್ವಯವಾಗುವಂತೆ ರೂ.5,000/- ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್ ಅವರು ಹೇಳಿದ್ದಾರೆ.
ಜಿಲ್ಲಾ ಪೊಲೀಸ್ ಘಟಕವು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪೊಲೀಸ್ ಸಿಬ್ಬಂದಿಯಲ್ಲಿ ಒಗ್ಗಟ್ಟಿರಲಿ, ಮಾಡುವ ಕಾರ್ಯ ಸದುದ್ದೇಶದಿಂದ ಕೂಡಿರಲಿ, ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆ ಮಾಡಲು, ಸಾಮಾಜಿಕ ನ್ಯಾಯಕ್ಕಾಗಿ ಸದಾ ದುಡಿಯುವ ನಾವು ಎಂದಿಗೂ ಅರಿತು ತಪ್ಪು ಮಾಡಬಾರದು. ತುಳಿತಕ್ಕೊಳಗಾದವರಿಗೆ, ನೊಂದವರಿಗೆ ಇಲಾಖೆ ಧ್ವನಿಯಾಗಬೇಕು ಎಂದವರು ನುಡಿದರು.
ಪೊಲೀಸ್ ಸಿಬ್ಬಂದಿ ಪ್ರಾಮಾಣಿಕ ಸೇವೆಯು ಇಲಾಖೆ ಯನ್ನು ಸಾಮಾಜಿಕವಾಗಿ ಎತ್ತರದ ಸ್ಥಾನದಲ್ಲಿ ನಿಲ್ಲಿಸುತ್ತದೆ. ಇಲಾಖೆಗೆ ಸಾಮಾಜಿಕವಾಗಿ ಗುರುತಿಸಬಹುದಾದ ಗೌರವ, ಆಧಾರಗಳು ದೊರೆತಿದ್ದರೆ ಅದಕ್ಕೆ ಇಲಾಖೆಯ ಸಿಬ್ಬಂದಿಯ ಅವಿರತ ಶ್ರಮವೇ ಕಾರಣ. ಆದರೂ, ಪ್ರಸ್ತುತ ದಿನಗಳಲ್ಲಿ ಇಲಾಖೆ ಆರೋಪಗಳಿಂದ ಹೊರತಾಗಿಲ್ಲದಿರುವುದು ಬೇಸರದ ಸಂಗತಿ ಎಂದ ಅವರು, ಇಲಾಖಾ ಸಿಬ್ಬಂದಿ ತಮ್ಮ ಜವಾಬ್ದಾರಿಯರಿತು ಇನ್ನಷ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದರು.
ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ ಮತ್ತು ಡಿ ದರ್ಜೆಯ ಸಿಬ್ಬಂದಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಗುಣಾತ್ಮಕವಾದ ಶಿಕ್ಷಣ ನೀಡಲು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಮೀಪದಲ್ಲಿರುವ ಹಳೆಯ ಕೊಠಡಿಯೊಂದನ್ನು ದುರಸ್ತಿಗೊಳಿಸಿ ಮಾದರಿ ಶಿಕ್ಷಣ ತರಗತಿಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು. ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರ ಶುಭ ಸಮಾರಂಭಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಸಮುದಾಯವನ್ನು ನಿರ್ಮಾಣ ಮಾಡಲು ನಿವೇಶನವನ್ನು ಗುರುತಿಸಲಾಗಿದ್ದು, ಮೇ-ಜೂನ್ ಮಾಹೆಯಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿ.ಎಚ್.ಸಿ. ಜಿಲ್ಲಾ ಅಪರಾಧ ದಾಖಲಾತಿ ವಿಭಾಗದ ನಿವೃತ್ತ ಅಧಿಕಾರಿ ಎಂ.ನಾರಾಯಣ ಅವರು ವಂದನೆ ಸ್ವೀಕರಿಸಿ ಮಾತನಾಡಿ, ಪೊಲೀಸರು ತಮ್ಮ ಕಾರ್ಯವನ್ನು ಸವಾಲಾಗಿ ಸ್ವೀಕರಿಸಿ, ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಸಾರ್ವಜನಿಕರ ಸೇವೆ ಮಾಡಬೇಕು. ಅಂತೆಯೇ ಹಿರಿಯ ಅಧಿಕಾರಿಗಳು ಸೂಚಿಸುವ ಕಾರ್ಯವನ್ನು ನಿರ್ಲಕ್ಷಿಸದೇ ಸಕಾಲದಲ್ಲಿ ನಿರ್ವಹಿಸಬೇಕು. ಆಗ ಸಹಜವಾಗಿ ಗೌರವಾಧಾರಗಳು ಬರಲಿವೆ ಎಂದವರು ನುಡಿದರು.
ಇದೇ ಸಂದಭರ್ದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ 2015-16ನೆ ಸಾಲಿನಲ್ಲಿ ಜಿಲ್ಲೆಯಲ್ಲಿ ನಿವೃತ್ತರಾದ 74 ಮಂದಿ ಪೊಲೀಸ್ ಅಧಿಕಾರಿ-ಸಿಬ್ಬಂದಿಯ ಶ್ಲಾಘನೀಯ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು. ಪೆರೇಡ್ ಕಮಾಂಡರ್ ಪ್ರದೀಪಕುಮಾರ್ ಅವರ ನೇತೃತ್ವದಲ್ಲಿ ನಡೆದ ಕವಾಯತಿನಲ್ಲಿ ಮಹಿಳಾ ಪೊಲೀಸ್ ತುಕಡಿ ಸೇರಿದಂತೆ ಒಟ್ಟು ಐದು ತುಕಡಿಗಳ ನಿಧಾನ ಮತ್ತು ವೇಗದ ನಡಿಗೆ ಆಕರ್ಷಕವಾಗಿತ್ತು. ಪೊಲೀಸ್ ಬ್ಯಾಂಡ್ ಕಾರ್ಯಕ್ರಮಕ್ಕೆ ಮೆರಗು ತಂದಿತ್ತು.
ಕಾರ್ಯಕ್ರಮದಲ್ಲಿ ಎಎಸ್ಪಿ ಡಾ.ವಿಷ್ಣುವಧರ್ನ ಸೇರಿದಂತೆ ಹಿರಿಯ ನಾಗರಿಕ ಸಲಹಾ ಸಮಿತಿಯ ಸದಸ್ಯರು, ಪೊಲೀಸ್ ಕುಟುಂಬದ ಸದಸ್ಯರು, ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು, ಜಿಲ್ಲಾ ಮಟ್ಟದ ಎಲ್ಲ್ಲ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.