ಪಾಕಿಸ್ತಾನದ ಸಂಬಂಧ ಕಳೆದುಹೋಗಲು ಸಾಹಿತ್ಯ ಕಾರಣ: ಪ್ರೊ.ವಿವೇಕ ರೈ

Update: 2016-04-03 16:40 GMT

ಬೆಂಗಳೂರು, ಎ.3: ಪಾಕಿಸ್ತಾನದೊಂದಿಗೆ ಮುಕ್ತ ಸಂವಾದ ಮಾಡುವ ವೇದಿಕೆಯ ಅವಕಾಶ ಕಳೆದುಹೋಗಲು ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಬಂದಿರುವ ಸಾಹಿತ್ಯ ಕಾರಣ ಎಂದು ಹಂಪಿ ಕನ್ನಡ ವಿವಿಯ ವಿಶ್ರಾಂತ ಉಪಕುಲಪತಿ ಪ್ರೊ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ.
 ರವಿವಾರ ನಗರದ ಬಸವನಗುಡಿ ನ್ಯಾಶನಲ್ ಕಾಲೇಜಿನ ಸಭಾಂಗಣದಲ್ಲಿ ಲಡಾಯಿ ಪ್ರಕಾಶನ, ಕಾವ್ಯಮಂಡಲ, ಶೂದ್ರ, ಪ್ರಜಾವಿಮೋಚನ ಚಳವಳಿ ಮತ್ತು ರಂಗಸಮುದ್ರ ಸಹಯೋಗದೊಂದಿಗೆ ಏರ್ಪಡಿಸಿದ್ದ ಸಾಹಿತಿ ಮತ್ತು ‘ವಾರ್ತಾಭಾರತಿ’ ಪತ್ರಿಕೆಯ ಅಂಕಣಕಾರ ಶೂದ್ರ ಶ್ರೀನಿವಾಸ್‌ರ ‘ಯು.ಆರ್.ಎಂಬ ನೀವು-ಒಂದು ನೋಟ, ಅವಳು ನಡೆದಂತೆ (ಗಝಲ್) ಹಾಗೂ ಪಾಕಿಸ್ತಾನದ ನೆಲದಲ್ಲಿ ಸಂಬಂಧಗಳ ಹುಡುಕಾಟ’ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಾಕಿಸ್ತಾನ ಎಂಬ ಶಬ್ದವನ್ನು ಭಾರತದಲ್ಲಿ ಕೇಳಿದರೆ ಧರ್ಮದ ಕಟ್ಟಡ ನಿರ್ಮಾಣ ವಾಗುತ್ತಿದೆ. ಇಂತಹ ಕಟ್ಟಡವನ್ನು ನಿರ್ಮಿಸಿದವರು ಇಲ್ಲಿನ ಜನರೇ. ಆದರೆ, ಅವರಲ್ಲಿ ಭಾವನೆಗಳನ್ನು ಹುಟ್ಟು ಹಾಕಿದ್ದು, ಪಾಕಿಸ್ತಾನ ಮತ್ತು ಭಾರತ ವಿಭಜನೆ ಕಾಲದಲ್ಲಿ ಬಂದ ರಾಜಕೀಯ ಹಾಗೂ ಸಾಹಿತ್ಯ ರೂಪದ ಭಾಷೆಯೆ ಕಾರಣವಾಗಿದೆ ಎಂದು ತಿಳಿಸಿದರು.
ಧಾರ್ಮಿಕ ಮೂಲಭೂತವಾದಿಗಳ ಕೈಯಲ್ಲಿರುವ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದಮನಗೊಳಿಸಲಾಗುತ್ತಿದೆ ಎಂದ ಅವರು, ಸೃಜನಶೀಲತೆ ಎಂಬುವುದು ಒಂದು ಧರ್ಮ, ಜಾತಿಗೆ ಸೀಮಿತಗೊಂಡಿಲ್ಲ. ಜಾತಿ-ಧರ್ಮವನ್ನು ಮೀರಿ ಸಾಹಿತ್ಯ ರಚನೆ ಮಾಡುವುದು ಕಷ್ಟಕರವಾಗಿದ್ದರೂ, ಅದರಲ್ಲಿನ ಸತ್ಯವನ್ನು ಪ್ರಪಂಚಕ್ಕೆ ಪರಿಚಾಯಿಸಬಹುದಾಗಿದೆ ಎಂದು ನುಡಿದರು.
ಪಾಕಿಸ್ತಾನದ ಜನ ಜೀವನ, ಅಲ್ಲಿನ ಸಂಸ್ಕೃತಿ ಹಾಗೂ ಅಲ್ಲಿರುವ ಸಂಬಂಧಗಳ ಬಗ್ಗೆ ಭಾರತೀಯರಿಗೆ ಪರಿಚಯಿಸುವಲ್ಲಿ ಲೇಖಕ ಶೂದ್ರ ಶ್ರೀನಿವಾಸ್ ಯಶಸ್ವಿಯಾಗಿದ್ದಾರೆ. ಶೂದ್ರರು ರಾಜಕೀಯ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ತಮ್ಮ ಬರವಣಿಗೆಯಲ್ಲಿಯೇ ಧ್ವನಿಗೂಡಿಸುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
 ಮಾಜಿ ಸಂಸದ ಪಿ.ಕೋದಂಡರಾಮಯ್ಯ ಮಾತನಾಡಿ, ಹಿಂದೂ ಮತ್ತು ಮುಸ್ಲಿಮ್ ಎರಡೂ ಸಂಘಟನೆಗಳ ಪ್ರಚೋದನೆಯಿಂದ ಉಗ್ರವಾದ ನಡೆಯುತ್ತಿದ್ದು, ಭಾರತಕ್ಕಿಂತ ಪಾಕಿಸ್ತಾನವೇ ಹೆಚ್ಚಾಗಿ ಭಯೋತ್ಪಾದನೆ ಸಮಸ್ಯೆಗೆ ಗುರಿಯಾಗಿದೆ. ಇತ್ತೀಚಿಗೆ ಉತ್ತರ ಭಾರತದಲ್ಲಿ ಗೋವು ಮಾರಾಟ ಮಾಡುವ ಬಡ ವ್ಯಾಪಾರಿಯನ್ನು ಉದ್ದೇಶ ಪೂರಕವಾಗಿ ಹತ್ಯೆ ಮಾಡಲಾಗಿದೆ. ಇಂತಹ ಬೆಳವಣಿಗೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
  ಉರ್ದು ಒಂದು ಐತಿಹಾಸಿಕ ಭಾಷೆಯಾಗಿದ್ದು, ಮುಸ್ಲಿಮ್ ಸಮುದಾಯಕ್ಕೆ ಸೇರದ ಅನೇಕ ಉರ್ದು ಭಾಷಾ ಸಾಹಿತಿಗಳಿದ್ದು, ಉತ್ತಮ ಸಾಹಿತ್ಯ ರಚನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದ ಅವರು, ಪಾಕಿಸ್ತಾನ ಮತ್ತು ಭಾರತ ವಿಭಜನೆಯಾದ ಕಾರಣದಿಂದ ದೇಶದಲ್ಲಿ ಉರ್ದು ಭಾಷಾ ವ್ಯಾಪ್ತಿ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಮರ್ಶಕರಾದ ಡಾ.ತಾರಿಣಿಶು ಭದಾಯಿನಿ, ಜಯಶ್ರೀ ಕಂಬಾರ, ಎಚ್.ದಂಡಪ್ಪ ಲೋಕಾರ್ಪಣೆಗೊಂಡ ಮೂರು ಪುಸ್ತಕಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಲಡಾಯಿ ಪ್ರಕಾಶನದ ಬಸೂ ಗದಗ ಸೇರಿ ಪ್ರಮುಖರು ಹಾಜರಿದ್ದರು.

ಸಾಹಿತ್ಯ ಸಂಸ್ಕೃತಿ ಎನ್ನುವುದು ವಿಚಾರವನ್ನು ಮತ್ತೊಬ್ಬರಿಗೆ ಹೇಳುವ ಒಂದು ವೇದಿಕೆಯಾಗಿದೆ. ಅದೇ ರೀತಿ, ನಮ್ಮ ಜೀವನದಲ್ಲಿ ಬರುವ ನೋವು-ನಲಿವುಗಳನ್ನು ಸಮಾನವಾಗಿ ನೋಡುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು.
-ಶೂದ್ರ ಶ್ರೀನಿವಾಸ್, ಸಾಹಿತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News