ಛಾಯಾಗ್ರಹಣಕ್ಕೂ ಪ್ರವಾಸೋದ್ಯಮಕ್ಕೂ ಪೂರಕ ಸಂಬಂಧ: ಅಪರ ಡಿಸಿ ಸತೀಶ್ ಕುಮಾರ್
ಮಡಿಕೇರಿ, ಎ.5: ಕೊಡಗಿನ ಪರಿಸರ, ಸಂಸ್ಕೃತಿ ಮತ್ತು ಪ್ರಕೃತಿಯೊಂದಿಗೆ ಛಾಯಾಗ್ರಹಣ ಪೂರಕ ಸಂಬಂಧವನ್ನು ಹೊಂದಿದ್ದು, ಪ್ರವಾಸೋದ್ಯಮದ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಛಾಯಾಗ್ರಾಹಕರ ಸಂಘ ಮತ್ತು ಕೊಡಗು ಜಿಲ್ಲಾ ಛಾಯಾಗ್ರಾಹಕರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಕೆಳಗಿನ ಗೌಡ ಸಮಾಜದಲ್ಲಿ ನಡೆದ ‘ಡಿಜಿ ಇಮೇಜ್-2016’ರ ಪ್ರಚಾರ ಅಭಿಯಾನ ಮತ್ತು ಛಾಯಾಗ್ರಹಣ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರವಾಸೋದ್ಯಮ ಕೇಂದ್ರವಾಗಿ ಪ್ರಗತಿಯನ್ನು ಕಾಣುತ್ತಿರುವ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳನ್ನು ಜನರ ಮುಂದೆ ತೆರೆದಿಡುವ ಮಾಧ್ಯಮವಾಗಿ ಛಾಯಾಗ್ರಹಣ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಪರಿಣಾಮಕಾರಿ ಛಾಯಾಚಿತ್ರಗಳು ಛಾಯಾಗ್ರಾಹಕನ ಶ್ರಮದಿಂದ ಮೂಡಿ ಬರಲು ಸಾಧ್ಯವೆಂದ ಅವರು ಛಾಯಾಗ್ರಹಣದ ಹವ್ಯಾಸವನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಮಾತನಾಡಿ, ಖಾಲಿ ಹಾಳೆ ಮತ್ತು ಸ್ಕೆಚ್ ಪೆನ್‌ನಿಂದ ಮನಸ್ಸಿನ ಮೇಲೆ ಯಾವುದೇ ಪರಿಣಾಮ ಉಂಟಾಗಲಾರದು. ಆದರೆ, ಅದೇ ಸ್ಕೆಚ್ ಪೆನ್‌ನಿಂದ ಬಿಳಿ ಹಾಳೆಯ ಮೇಲೆ ಮೂಡುವ ಕಲೆ ವಿಭಿನ್ನ ಭಾವನೆಗಳನ್ನು ಮೂಡಿಸಬಲ್ಲುದೆಂದು ಅಭಿಪ್ರಾಯಪಟ್ಟರು. ಪ್ರಸ್ತುತ ಛಾಯಾಗ್ರಹಣ ಕ್ಷೇತ್ರದಲ್ಲಿ ಕ್ರಿಯಾಶೀಲತೆ ಕುಂಠಿತಗೊಳ್ಳುತ್ತಿದೆಯೆಂದು ವಿಷಾದಿಸಿದರು. ಡಿಜಿ ಇಮೇಜ್ ಪ್ರಚಾರ ಪೋಸ್ಟರ್ ಬಿಡುಗಡೆ: ಬೆಂಗಳೂರಿನಲ್ಲಿ ಜು.15ರಿಂದ 17ರವರೆಗೆ ನಡೆಯಲಿರುವ ‘ಡಿಜಿ ಇಮೇಜ್-2016 ’ ಛಾಯಾಚಿತ್ರ ಪ್ರದರ್ಶನದ ಪ್ರಚಾರದ ಪೋಸ್ಟರ್‌ಗಳನ್ನು ಇದೇ ಸಂದರ್ಭ ಗಣ್ಯರು ಬಿಡುಗಡೆ ಮಾಡಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಡಾಡು ಜೋಸೆಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಫೊಟೋ ಎಕ್ಸ್‌ಪ್ರೆಸ್ ಕಲರ್ ಲ್ಯಾಬ್‌ನ ನವೀನ್ ಅಂಬೇಕಲ್ ಮಾತನಾಡಿದರು. ಹಿರಿಯ ಛಾಯಾಗ್ರಾಹಕ ಆಸ್ಟ್ರೋ ಮೋಹನ್, ಕರ್ನಾಟಕ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಎಚ್.ಎಸ್.ನಾಗೇಶ್, ರಾಜ್ಯ ಸಂಘದ ನಿರ್ದೇಶಕ ಎಚ್.ಎಸ್. ಸಲೀಂ, ಉಮಾ ಶಂಕರ್, ಸಂಪತ್ ಕುಮಾರ್, ಮಡಿಕೇರಿ ತಾಲೂಕು ಸಂಘದ ಅಧ್ಯಕ್ಷ ಪಿ.ಎ.ಲೂಯಿಸ್. ಸೋಮವಾರಪೇಟೆ ಸಂಘದ ಅಧ್ಯಕ್ಷ ಸೋಲೋಮನ್ ಡೇವಿಡ್, ಶನಿವಾರಸಂತೆ ಸಂಘದ ಅಧ್ಯಕ್ಷ ನಿಂಗರಾಜು ಗೌಡ, ಕುಶಾಲನಗರ ಸಂಘದ ಅಧ್ಯಕ್ಷ ಕೆ.ಜಿ. ಪ್ರಮೋದ್, ವೀರಾಜಪೇಟೆ ಸಂಘದ ಅಧ್ಯಕ್ಷ ಟಿ. ಶಿವ ಕುಮಾರ್ ಉಪಸ್ಥಿತರಿದ್ದರು.
ಜು.2ರಂದು ರಾಜ್ಯಾದ್ಯಂತ ಛಾಯಾಗ್ರಹಣ ಬಂದ್: ಸರಕಾರದ ಎಲ್ಲ ಕಾರ್ಯಕ್ರಮಗಳು, ಸಭೆ ಸಮಾರಂಭಗಳಿಗೂ ಯಾವುದೇ ಸಂದರ್ಭದಲ್ಲಿ ಛಾಯಾಗ್ರಹಣ ಮಾಡಿ ಛಾಯಾಗ್ರಾಹಕರು ಸಹಕರಿಸುತ್ತಿದ್ದಾರೆ. ಆದರೆ ಛಾಯಾಗ್ರಾಹಕರ ಸಂಕಷ್ಟಗಳಿಗೆ ಸರಕಾರ ಸ್ಪಂದಿಸದೆ ಇರುವುದರಿಂದ ಜು.2ರಂದು ರಾಜ್ಯಾದ್ಯಂತ ಛಾಯಾಗ್ರಹಣ ಬಂದ್ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಎಚ್.ಎಸ್. ನಾಗೇಶ್ ತಿಳಿಸಿದ್ದಾರೆ.
ಸರಕಾರ ತನ್ನ ಇಲಾಖೆಗಳಲ್ಲಿ ಹಿಂದೆ ಛಾಯಾಗ್ರಹಣಕ್ಕೆ ನೀಡುತ್ತಿದ್ದ ಅವಕಾಶಗಳನ್ನು ಒಂದೊಂದಾಗಿ ಹಿಂದಕ್ಕೆ ಪಡೆಯುತ್ತಿದ್ದು, ಇದಕ್ಕೆ ಬದಲಾಗಿ ವೆಬ್ ಕ್ಯಾಮೆರಾ ಮೊದಲಾದ ತಂತ್ರಜ್ಞ್ಞಾನವನ್ನು ಬಳಸಿಕೊಳ್ಳುತ್ತಿದೆಯೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.