ಮಡಿಕೇರಿ: ದುಬಾರೆಯಲ್ಲಿ ರಿವರ್ ರ್ಯಾಫ್ಟಿಂಗ್ ನಿರ್ವಹಣೆ
ಮಡಿಕೇರಿ, ಎ.5: ದುಬಾರೆಯಲ್ಲಿ ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಸಂಬಂಧ ಕೂಡಲೇ ಟೆಂಡರ್ ಆಹ್ವಾನಿಸಲು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ದುಬಾರೆಯಲ್ಲಿ ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಪ್ರವಾಸಿಗರ ಸುರಕ್ಷತೆ ಮತ್ತು ರಕ್ಷಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕಿದೆ. ಆ ದಿಸೆಯಲ್ಲಿ ಕೆಲವು ನಿಬಂಧನೆಗಳನ್ನು ಅಳವಡಿಸಿ ಟೆಂಡರ್ ಆಹ್ವಾನಿಸುವಂತೆ ಡಿಸಿ ಸಲಹೆ ನೀಡಿದರು.
ಜಿಲ್ಲೆಯ ಅಬ್ಬಿಪಾಲ್ಸ್, ಮಾಂದಲ್ ಪಟ್ಟಿ, ದುಬಾರೆ ಮತ್ತಿತರ ಕಡೆಗಳಲ್ಲಿ ಪ್ರವಾಸಿಗರಿಗೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸದಿರುವ ಹಿನ್ನೆಲೆ ಈ ಪ್ರದೇಶಗಳಲ್ಲಿ ವಾಹನ ಪಾರ್ಕ್‌ನ್ನು ಸಮರ್ಪಕವಾಗಿ ನಿರ್ವಹಿಸುವಂತಾಗಲು ಟೆಂಡರ್ ಆಹ್ವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲೆಯ ನಗರಸಭೆ, ಪಪಂ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಎಷ್ಟು ಹೋಂ ಸ್ಟೇಗಳಿವೆ. ಇವುಗಳಲ್ಲಿ ನೋಂದಾಯಿತ ಹೋಂ ಸ್ಟೇಗಳೆಷ್ಟು, ನೋಂದಣಿಗೆ ಅರ್ಜಿ ಸಲ್ಲಿಸಿರುವ ಹೋಂ ಸ್ಟೇಗಳೆಷ್ಟು ಹಾಗೂ ಅನಧಿಕೃತವಾಗಿ ನಡೆಯುತ್ತಿರುವ ಹೋಂಸ್ಟೇಗಳೆಷ್ಟು ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಕೂಡಲೇ ಮಾಹಿತಿ ಪಡೆಯುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಈ ಕುರಿತು ಮಾಹಿತಿ ನೀಡಿದ ಹೋಂ ಸ್ಟೇ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಕರುಂಬಯ್ಯ, ಜಿಲ್ಲೆಯಲ್ಲಿ ಮೂರು ಸಾವಿರದಿಂದ ಮೂರುವರೆ ಸಾವಿರದವರೆಗೆ ಹೋಂ ಸ್ಟೇಗಳಿದ್ದು, ಇದರಲ್ಲಿ 298ಹೋಂ ಸ್ಟೇಗಳು ನೋಂದಣಿಯಾಗಿವೆ. ಸುಮಾರು 300 ಹೋಂ ಸ್ಟೇಗಳು ನೋಂದಣಿಗೆ ಅರ್ಜಿ ಸಲ್ಲಿಸಿವೆ ಎಂದರು. ಸುಮಾರು 2,500ರಿಂದ 3 ಸಾವಿರ ಹೋಂ ಸ್ಟೇಗಳು ಕಾನೂನು ಬಾಹಿರವಾಗಿ ನಡೆಯುತ್ತಿವೆ. ಇದರಿಂದ ಸರಕಾರಿ ನೌಕರರಿಗೆ ಹಾಗೂ ವ್ಯಾಪಾರಿಗಳಿಗೆ ವಸತಿ ಗೃಹಗಳು ಬಾಡಿಗೆಗೆ ಸಿಗುತ್ತಿಲ್ಲ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು. ತಲಕಾವೇರಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ: ನಾಡಿನ ಜೀವನದಿ ತಲಕಾವೇರಿ ಉಗಮ ಸ್ಥಾನದಲ್ಲಿ ಸ್ವಚ್ಛತೆ ಹಾಗೂ ಉತ್ತಮ ಪರಿಸರ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕಿದೆ. ತಲಕಾವೇರಿ ಧಾರ್ಮಿಕ ಕ್ಷೇತ್ರವಾಗಿದ್ದು, ಆ ನಿಟ್ಟಿನಲ್ಲಿ ದೇವಸ್ಥಾನ ಮಂಡಳಿ ಹಾಗೂ ಗ್ರಾಪಂನವರೇ ಸ್ವಚ್ಛತೆ ಹಾಗೂ ವಾಹನ ಪಾರ್ಕಿಂಗ್ ನಿರ್ವಹಣೆ ಮಾಡಬೇಕೆಂದು ಸಲಹೆ ನೀಡಿದರು. ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸಿ.ಜಗನ್ನಾಥ ಅವರು ಮಾತನಾಡಿ, ಭಾಗಮಂಡಲದಿಂದ-ತಲಕಾವೇರಿಗೆ ಬಸ್ ಸೌಲಭ್ಯ ಕೊರತೆ ಇದ್ದು, ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕಿದೆ ಎಂದು ಅವರು ಸಭೆಯ ಗಮನಕ್ಕೆ ತಂದರು. ಈ ಕುರಿತು ಮಾತನಾಡಿದ ಟ್ರಾವೆಲ್ ಕೂರ್ಗ್‌ನ ಸತ್ಯಾ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲ ಸ್ವಾಮಿ ಬೆಟ್ಟಕ್ಕೆ ಬಸ್ ಸೌಲಭ್ಯ ಕಲ್ಪಿಸಿರುವಂತೆ, ತಲಕಾವೇರಿಗೂ ವ್ಯವಸ್ಥೆ ಮಾಡುವಂತಾಗಬೇಕು ಎಂದರು. ರಾಜಾಸೀಟ್, ಅಬ್ಬಿ ಮತ್ತು ಇರ್ಪು ಫಾಲ್ಸ್ ಅಭಿವೃದ್ಧಿ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಇರ್ಪು ಜಲಪಾತಕ್ಕೆ ತೆರಳಲು ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಹಣವಿದ್ದು, ಅರಣ್ಯ ಇಲಾಖೆಗೆ ವಹಿಸಲಾಗುವುದು ಎಂದರು. ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಮೋಂತಿ ಗಣೇಶ್ ಮಾತನಾಡಿ, ಅಬ್ಬಿಫಾಲ್ಸ್ ಇರುವುದು ಖಾಸಗಿ ತೋಟದಲ್ಲಿ ಆದರೂ ಗ್ರಾಪಂನವರು ತೆರಿಗೆ ಸಂಗ್ರಹಿಸುತ್ತಾರೆ. ಆದರೆ ಸಮಪರ್ಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಅವರು ದೂರಿದರು.
ಪ್ರವಾಸಿಗರು ಗಾಂಧಿ ಮೈದಾನ, ಭಾಗಮಂಡಲ ಮತ್ತಿತರ ಕಡೆಗಳಲ್ಲಿ ಅಡುಗೆ ಮಾಡಿ ತ್ಯಾಜ್ಯಗಳನ್ನು ಅಲ್ಲೇ ಬಿಸಾಡುತ್ತಾರೆ. ಇದನ್ನು ನಿಯಂತ್ರಣ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ಹೊಟೇಲ್ ಅಸೋಷಿಯೇಶನ್‌ನ ಅಧ್ಯಕ್ಷ ಕೋಟಿ, ಮದನ್ ಸೋಮಣ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಡಕುಂಡಲು ಮತ್ತಿತರರು ಉಪಸ್ಥಿತರಿದ್ದರು.