×
Ad

2016-17ನೆ ಸಾಲಿಗೆ 3,844 ಕೋಟಿ ರೂ. ಸಾಲ ಬಿಡುಗಡೆ

Update: 2016-04-05 22:17 IST

 ಮಡಿಕೇರಿ, ಎ. 5: ಲೀಡ್‌ಬ್ಯಾಂಕ್ ವತಿಯಿಂದ 2016-17ನೆ ಸಾಲಿಗೆ ತಯಾರಿಸಲಾದ 3,844 ಕೋಟಿ ರೂ.ಗಳ ಸಾಲ ಯೋಜನೆಯನ್ನು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ ಸಿಂಹ ಅವರು ಬಿಡುಗಡೆ ಮಾಡಿದರು. ನಗರದ ಲೀಡ್‌ಬ್ಯಾಂಕ್ ಕಾರ್ಪೊರೇಷನ್ ಬ್ಯಾಂಕ್‌ನ ಸಭಾಂಗಣದಲ್ಲಿ ಮಂಗಳವಾರ ಸಾಲ ಯೋಜನೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಣ್ಣ ಮತ್ತು ಅತೀ ಸಣ್ಣ ಉದ್ಯಮಗಳಿಂದ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿದ್ದು, ಈ ಕ್ಷೇತ್ರಗಳಿಗೆ ಹೆಚ್ಚಿನ ಸಾಲ ಸೌಲಭ್ಯ ಸಕಾಲದಲ್ಲಿ ದೊರೆಯುವಂತಾಗಬೇಕು ಎಂದು ಅವರು ಹೇಳಿದರು. ಸಾಲ ಯೋಜನೆ ಸಂಬಂಧಿಸಿದಂತೆ ಜನವರಿಯಲ್ಲಿ ತರಾತುರಿಯಲ್ಲಿ ಸಾಲ ನೀಡುವುದಲ್ಲ. ಈಗಿನಿಂದಲೇ ಸಾಲ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಸಾಲ ಪಡೆದವರು ಕಾಲ ಕಾಲಕ್ಕೆ ಮರುಪಾವತಿ ಮಾಡಬೇಕು ಎಂದು ಅವರು ಕರೆ ನೀಡಿದರು.

ರೈತರು, ಕಾರ್ಮಿಕರು, ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಹೀಗೆ ಎಲ್ಲರಿಗೂ ಸಾಲವನ್ನು ನೀಡಲು ಸಹಕರಿಸಬೇಕು. ಪ್ರಧಾನಮಂತ್ರಿ ಮುದ್ರಾ ಯೋಜನೆ, ಜನ್‌ಧನ ಯೋಜನೆ ಪ್ರಗತಿ, ಆಧಾರ್ ಜೊತೆ ಜೋಡಣೆ, ಶಿಶು, ಕಿಶೋರಿ ಯೋಜನೆಗಳನ್ನು ತಲುಪಿಸಬೇಕು. ಪ್ರತಿಯೊಬ್ಬರಲ್ಲೂ ಸ್ವಾವಲಂಬನೆ ಬದುಕು ಕಾಣುವಂತಾಗಲು ಸಾಲವನ್ನು ನೀಡಿ ಸಹಕರಿಸಬೇಕು ಎಂದು ಪ್ರತಾಪ್ ಸಿಂಹ ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ ಮಾತನಾಡಿ, ಬ್ಯಾಂಕ್‌ಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಜನಪರವಾಗಿ ಕಾರ್ಯನಿರ್ವಹಿಸಬೇಕು. ಸರಕಾರ ಜಾರಿಗೊಳಿಸಿರುವ ಯೋಜನೆಗಳನ್ನು ನಾಗರಿಕರಿಗೆ ತಲುಪಿಸಬೇಕು. ಸಮಾಜದ ಪ್ರತಿಯೊಬ್ಬರೂ ಬ್ಯಾಂಕ್‌ನ ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಪ್ರಗತಿ ಸಾಧಿಸುವಂತಾಗಲು ಸಹಕರಿಸಬೇಕು ಎಂದು ಹೇಳಿದರು. ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಮುಂಡಂಡ ಸಿ.ನಾಣಯ್ಯ ಮಾತನಾಡಿ, ಕೃಷಿ-ಕೈಗಾರಿಕೆ, ಸಣ್ಣ ಉದ್ಯಮ, ಹೀಗೆ ಆದ್ಯತಾ ವಲಯಕ್ಕೆ ಸೇರಿದಂತೆ 3,844 ಕೋಟಿ ರೂ. ಸಾಲ ಯೋಜನೆಯನ್ನು ಪ್ರಸಕ್ತ ಸಾಲಿಗೆ ತಯಾರಿಸಲಾಗಿದ್ದು, ಬ್ಯಾಂಕ್ ವ್ಯವಸ್ಥಾಪಕರು ಪ್ರಗತಿ ಸಾಧಿಸಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕಿದೆ ಎಂದು ಅವರು ತಿಳಿಸಿದರು. ಕಾರ್ಪೊರೇಷನ್ ಬ್ಯಾಂಕ್‌ನ ಸಹಾಯಕ ಮಹಾಪ್ರಬಂಧಕ ಸುದರ್ಶನ ಪುರಿ ಗೋಸ್ವಾಮಿ ಮಾತನಾಡಿ, ಬ್ಯಾಂಕ್‌ಗಳ ವ್ಯವಸ್ಥಾಪಕರು ಸಮಯಕ್ಕೆ ಸರಿಯಾಗಿ ಸಾಲವನ್ನು ನೀಡಿ ಉದ್ಯಮಿಗಳು, ಕೃಷಿಕರು, ವ್ಯಾಪಾರಿ ಉದ್ಯಮಿಗಳು ಮತ್ತಿತರರಿಗೆ ಉತ್ತೇಜನ ನೀಡುವಂತಾಗಬೇಕು. ಉದ್ಯಮಿಗಳು, ವ್ಯಾಪಾರಿ ಉದ್ಯಮಿಗಳು, ಕೃಷಿಕರು ಮತ್ತಿತರರ ಜೊತೆ ಸಮನ್ವಯ ಸಾಧಿಸಿ ಸಾಲ ಯೋಜನೆ ತಲುಪಿಸಲು ಮುಂದಾಗಬೇಕು ಎಂದರು.

  

ಆರ್‌ಬಿಐನ ಎಲ್‌ಡಿಒ ಗೋಪಿನಾಥ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 27 ಬ್ಯಾಂಕುಗಳ 164 ಶಾಖೆಗಳಿಗೆ ಸಾಲದ ಗುರಿಯನ್ನು ಹಂಚಲಾಗಿದ್ದು, ಮಡಿಕೇರಿ ತಾಲೂಕಿಗೆ 1,35,658 ಲಕ್ಷ ರೂ., ಸೋಮವಾರಪೇಟೆ ತಾಲೂಕಿಗೆ 1,03,739 ಲಕ್ಷ ರೂ., ವೀರಾಜಪೇಟೆ ತಾಲೂಕಿಗೆ 1,45,035 ಲಕ್ಷ ರೂ. ಸಾಲದ ಗುರಿಯನ್ನು ನಿಗದಿಪಡಿಸಲಾಗಿದೆ. ಸಾಲ ಯೋಜನೆಯಲ್ಲಿ ವಾಣಿಜ್ಯ ಬ್ಯಾಂಕುಗಳಿಗೆ 2,41,813 ಲಕ್ಷ ರೂ., ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ 15,892 ಲಕ್ಷ ರೂ., ಸಹಕಾರಿ ಬ್ಯಾಂಕ್‌ಗಳಿಗೆ 1,24,749 ಲಕ್ಷ ರೂ. ಹಾಗೂ ಇತರೆ 1,978 ಲಕ್ಷ ರೂ., ಬೆಳೆಸಾಲಕ್ಕೆ ರೂ. 2,408 ಕೋಟಿ ರೂ., ಅವಧಿ ಸಾಲಕ್ಕೆ 56,062 ಲಕ್ಷ ರೂ., ಇತರೆ 17,467 ಲಕ್ಷ ರೂ., ಒಟ್ಟು 3,143 ಕೋಟಿ ರೂ., ಸಣ್ಣ ಮತ್ತು ಮಧ್ಯಮ ಹಾಗೂ ಇತರೆ 25,375 ಲಕ್ಷ ರೂ., ಒಟ್ಟಾರೆ 3,844 ಕೋಟಿ ರೂ. ಸಾಲ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News