×
Ad

ಶಿವಮೊಗ್ಗ ಠಾಣೆಯಲ್ಲಿ ದಾಖಲಾದ ದೂರು

Update: 2016-04-05 22:20 IST

ಶಿವಮೊಗ್ಗ, ಎ. 5: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್.ಬಿ.ಎಂ.) ಗ್ರಾಹಕರ ಖಾತೆಗಳಿಂದ ಆನ್‌ಲೈನ್ ಬ್ಯಾಂಕಿಂಗ್ ಮೂಲಕ ‘ಸೈಬರ್ ಹ್ಯಾಕರ್ಸ್’ಗಳು ಹಣ ವಂಚಿಸಿದ ಪ್ರಕರಣವು ಇಡೀ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದು, ಬ್ಯಾಂಕ್ ಗ್ರಾಹಕರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಈ ನಡುವೆ ಶಿವಮೊಗ್ಗದ ಎಸ್.ಬಿ.ಎಂ. ಬ್ಯಾಂಕ್‌ನ ಶಾಖೆಯೊಂದರಲ್ಲಿಯೂ ಕೂಡ ಹ್ಯಾಕರ್ಸ್‌ಗಳು ಗ್ರಾಹಕರ ಖಾತೆಯಿಂದ ಹಣ ಎಗರಿಸಿದ್ದಾರೆ ಎಂಬ ಮಾಹಿತಿಗಳು ಸಾಕಷ್ಟು ಗೊಂದಲ ಸೃಷ್ಟಿಸುವಂತೆ ಮಾಡಿದೆ.

ದೂರು ದಾಖಲಾಗಿಲ್ಲ : ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಎಸ್.ಬಿ.ಎಂ. ಶಾಖೆಯಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು. ಹ್ಯಾಕರ್ಸ್‌ಗಳ ಕೈಚಳಕ ಶೃಂಗೇರಿಗೆ ಮಾತ್ರ ಸೀಮಿತವಾಗಿರದೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿಯೂ ವ್ಯಾಪಿಸಿರುವ ಮಾಹಿತಿ ಚಿಕ್ಕಮಗಳೂರು ಪೊಲೀಸರ ಗಮನಕ್ಕೆ ಬಂದಿತ್ತು. ‘ಚಿಕ್ಕಮಗಳೂರು ಮಾತ್ರವಲ್ಲದೆ ಮಂಗಳೂರು, ಉಡುಪಿ, ಶಿವಮೊಗ್ಗ, ಬೆಂಗಳೂರಿನ ಕೆಲ ಎಸ್.ಬಿ.ಎಂ. ಶಾಖೆಗಳಲ್ಲಿಯೂ ಹ್ಯಾಕರ್ಸ್‌ಗಳು ಖಾತೆದಾರರ ಖಾತೆಗೆ ಕನ್ನ ಹಾಕಿರುವ ಮಾಹಿತಿಗಳು ತಿಳಿದುಬಂದಿವೆ’ ಎಂದು ಚಿಕ್ಕಮಗಳೂರು ಪೊಲೀಸ್ ಇಲಾಖೆ ತಿಳಿಸಿತ್ತು. ಆದರೆ ಸೈಬರ್ ಹ್ಯಾಕರ್ಸ್‌ಗಳ ಕನ್ನದ ಬಗ್ಗೆ ಇಲ್ಲಿಯವರೆಗೂ ಶಿವಮೊಗ್ಗ ನಗರ ಅಥವಾ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿಲ್ಲ. ವಂಚನೆಗೊಳಗಾದ ಗ್ರಾಹಕರಾಗಲಿ ಅಥವಾ ಬ್ಯಾಂಕ್‌ನವರಾಗಲಿ ವಂಚನೆಗೊಳಗಾಗಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಈ ಕುರಿತಂತೆ ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವರ್ ಮಾತನಾಡಿ, ‘ಆನ್‌ಲೈನ್ ಮೂಲಕ ಹ್ಯಾಕರ್ಸ್‌ಗಳು ನಿರ್ದಿಷ್ಟ ಬ್ಯಾಂಕ್‌ವೊಂದರ ಗ್ರಾಹಕರ ಖಾತೆಯಿಂದ ಹಣ ವಂಚಿಸಿದ್ದಾರೆಂಬ ವಿಷಯದ ಬಗ್ಗೆ ಇಲ್ಲಿಯವರೆಗೂ ಯಾವುದೇ ದೂರು ಬಂದಿಲ್ಲ. ಹಾಗೆಯೇ ಬ್ಯಾಂಕ್‌ನವರು ಕೂಡ ಪೊಲೀಸರನ್ನು ಸಂಪರ್ಕಿಸಿಲ್ಲ. ಇನ್ನಷ್ಟೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ಏನಿದು ಪ್ರಕರಣ? : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಎಸ್‌ಬಿಎಂ ಬ್ಯಾಂಕ್ ಶಾಖೆಯೊಂದರಲ್ಲಿ 33 ಗ್ರಾಹಕರ ಖಾತೆಯಲ್ಲಿದ್ದ ಹಣವು ದೆಹಲಿ ಸಮೀಪದ ಗುಡಗಾಂನಲ್ಲಿ ಕಚೇರಿ ಹೊಂದಿರುವ ಮೊಬಿಕ್ವಿಕ್ ಇ ಕಾಮರ್ಸ್ ಸಂಸ್ಥೆ ಹೆಸರಿನಲ್ಲಿ ನೇರವಾಗಿ ವರ್ಗಾವಣೆಯಾಗಿತ್ತು. ಈ ಬಗ್ಗೆ ಗ್ರಾಹಕರ ಮೊಬೈಲ್‌ಗೂ ಸಂದೇಶಗಳು ಬಂದಿದ್ದವು. ಈ ಬಗ್ಗೆ ಸ್ಥಳೀಯ ಗ್ರಾಹಕರು ತಕ್ಷಣವೇ ಬ್ಯಾಂಕ್ ಸಿಬ್ಬಂದಿಗಳ ಗಮನಕ್ಕೆ ತಂದಿದ್ದರು. ಪರಿಶೀಲನೆಯಲ್ಲಿ ಹ್ಯಾಕರ್ಸ್‌ಗಳು ಖಾತೆದಾರರ ಖಾತೆಗಳಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದು ಬೆಳಕಿಗೆ ಬಂದಿದ್ದು. ಶೃಂಗೇರಿ ಮಾತ್ರವಲ್ಲದೆ ರಾಜ್ಯದ ಇತರೆಡೆಯೂ ಸೈಬರ್ ಹ್ಯಾಕರ್ಸ್ ಗಳು ಖಾತೆಗಳಿಂದ ಹಣ ವಂಚಿಸಿರುವ ಮಾಹಿತಿಯೂ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ ತಿಳಿದು ಬಂದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News