ನಿರ್ದೇಶಕ ಯೋಗರಾಜ್ ಭಟ್, ದುನಿಯಾ ವಿಜಯ್ ವಿರುದ್ಧ ದೂರು ದಾಖಲು
ಶಿವಮೊಗ್ಗ, ಎ.5: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಂಯೋಜಿಸಿದ ಗೀತೆಯಲ್ಲಿ ಪರೋಕ್ಷವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ರವರನ್ನು ನಿಂದಿಸಲಾಗಿದೆ ಎಂದು ಆರೋಪಿಸಿ, ಸಿನೆಮಾ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಚಿತ್ರನಟ ದುನಿಯಾ ವಿಜಯ್‌ರವರ ವಿರುದ್ಧ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಡುವಳ್ಳಿ ಹರ್ಷೇಂದ್ರಕುಮಾರ್, ಧರಣೇಶ್, ನಾಗೇಶ್ ಹಾಗೂ ಮಂಜುನಾಥ ಶೆಟ್ಟಿ ಎಂಬವರು ದೂರು ನೀಡಿದ್ದಾರೆ. ಟಿ.ವಿ. ಚಾನಲ್‌ವೊಂದರಲ್ಲಿ ಪ್ರಸಾರವಾದ ಗೀತೆಯಲ್ಲಿ ಪರೋಕ್ಷವಾಗಿ ಸಚಿವ ಕಿಮ್ಮನೆ ರತ್ನಾಕರ್‌ರವರನ್ನು ಅವಹೇಳನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯೋಗರಾಜ್ ಭಟ್ ಹಾಗೂ ದುನಿಯಾ ವಿಜಯ್‌ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ದೂರುದಾರರ ಆಗ್ರಹವಾಗಿದೆ. ದೂರು ಸ್ವೀಕರಿಸಿರುವ ತೀರ್ಥಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗ ದರ್ಶನ ಕೋರಿದ್ದು, ಅವರ ಸಲಹೆ- ಸೂಚನೆಯಂತೆ ಮುಂದಿನ ಕ್ರಮಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಸೂಕ್ತ ಕ್ರಮ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗಾರರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಮಾತನಾಡಿ, ‘ಈ ದೂರಿನ ಬಗ್ಗೆ ಪೂರ್ವಭಾವಿ ವಿಚಾರಣೆ ನಡೆಸಿದ ನಂತರ ಮುಂದಿನ ಕಾನೂನು ಕ್ರಮ ಜರಗಿಸಲಾಗುವುದು. ಅನಿವಾರ್ಯವಾದರೆ ನ್ಯಾಯಾಲಯದ ಅನುಮತಿ ಕೂಡ ಪಡೆದುಕೊಳ್ಳಲಾಗುವುದು. ಪೂರ್ವಭಾವಿ ಮಾಹಿತಿ ಕಲೆ ಹಾಕಿದ ನಂತರ ಕಾನೂನು ರೀತಿಯ ಕ್ರಮಕೈಗೊಳ್ಳುವಂತೆ ತನಿಖಾಧಿಕಾರಿಗೆ ಸೂಚನೆ ಕೊಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಕ್ರಮಕ್ಕೆ ಆಗ್ರಹ:
ಮಂಗಳವಾರ ದೂರುದಾರರಲ್ಲಿ ಓರ್ವರಾದ ಪಡುವಳ್ಳಿ ಹರ್ಷೇಂದ್ರಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ‘ರಸಾಯನಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಬಹಿರಂಗಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಸಿಐಡಿ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಜನರನ್ನು ಪ್ರಚೋದಿಸಲು ಹಾಗೂ ನೆಮ್ಮದಿ ಹಾಳು ಮಾಡಲು ಉದ್ದೇಶಪೂರ್ವಕವಾಗಿಯೇ ಈ ಗೀತೆ ರಚಿಸಲಾಗಿದೆ. ಹಾಗೆಯೇ ಈ ಗೀತೆಯಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ರವರ ತೇಜೋವಧೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು. ಈ ಗೀತೆ ನಿಷೇಧ ಮಾಡಬೇಕು ಎಂದು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ. ‘ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವ ಹಾಡು’: ‘ಒಮ್ಮೆ ಲೀಕಾದದ್ದು ಮತ್ತೆ ಲೀಕಾಗುವುದೋ ಲೋಕ ನಿಯಮವಾಗಿರಲು... ಮೂಕ ವಿದ್ಯಾರ್ಥಿ ಮೂರ್ನಾಲ್ಕು ಸರ್ತಿ ರಸಾಯನ ಶಾಸ್ತ್ರ ಪರೀಕ್ಷೆ ಬರೆಯಬೇಕಾ ರತ್ನಾಕರ.... ಜೈ ರಸಾಯನಶಾಸ್ತ್ರ... ತಗೊಳ್ಳಿ ದನ ಕಾಯೋ ರಿಂದ ಒಂದು ಬಹಿರಂಗ ಪತ್ರ...’ ಎಂಬ ಮಾತಿನೊಂದಿಗೆ ಈ ಹಾಡು ಆರಂಭವಾಗುತ್ತದೆ. ಪ್ರಸ್ತುತ ಈ ಹಾಡು ಸಾಮಾಜಿಕ ಸಂಪರ್ಕ ಜಾಲತಾಣಗಳಾದ ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್ ಮಾಧ್ಯಮಗಳಲ್ಲಿ ಬಹಳ ಜೋರಾಗಿಯೇ ಹರಿದಾಡುತ್ತಿದೆ. ಯೋಗರಾಜ್ ಭಟ್, ದುನಿಯಾ ವಿಜಯ್ ಹಾಗೂ ಇತರ ಗಾಯಕರ ಹಿನ್ನೆಲೆ ಧ್ವನಿಯಿರುವುದು ಕಂಡುಬರುತ್ತದೆ. ಜಾನಪದ ಶೈಲಿಯಲ್ಲಿ ಈ ಹಾಡಿನ ಟ್ರ್ಯಾಕ್ ಇದೆ. ಆಡಳಿತ ವ್ಯವಸ್ಥೆಯನ್ನು ವ್ಯಂಗ್ಯಭರಿತ ಪದಪ್ರಯೋಗದ ಮೂಲಕ ಪರೋಕ್ಷವಾಗಿ ಚಾಟಿ ಬೀಸಲಾಗಿದೆ. ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗಿದೆ.
ಈ ಹಾಡಿನಲ್ಲಿ ಪ್ರಶ್ನೆ ಪತ್ರಿಕೆ ಲೀಕಾಗಿದ್ದರಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಪಡಿ ಪಾಟಲು, ಮಕ್ಕಳ ಪರಿಸ್ಥಿತಿ ಕಂಡು ಆತಂಕ ದಲ್ಲಿರುವ ಪೋಷಕರ ಬಗ್ಗೆ ಮರುಕವಿದ್ದರೆ ಅಧಿಕಾರಸ್ಥರ ಕಾರ್ಯವೈಖರಿ, ಪ್ರಶ್ನೆ ಪತ್ರಿಕೆ ಬಹಿರಂಗಪಡಿಸುವ ಜಾಲದ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಗಿದೆ.