ವೌಲ್ಯಮಾಪನ ಕೇಂದ್ರಗಳ ಮುಂಭಾಗ ಉಪನ್ಯಾಸಕರ ಪ್ರತಿಭಟನೆ
ಶಿವಮೊಗ್ಗ, ಮಾ. 5: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ವೌಲ್ಯಮಾಪನಕ್ಕೆ ನಗರದಲ್ಲಿ ತೆರೆಯಲಾಗಿರುವ ಎರಡು ಕೇಂದ್ರಗಳ ಮುಂಭಾಗ ಮಂಗಳವಾರ ವೌಲ್ಯಮಾಪನ ಕಾರ್ಯಕ್ಕೆ ನಿಯೋಜಿತರಾದ ಪಿಯು ಉಪನ್ಯಾಸಕರು ಪ್ರತಿಭಟನೆ ನಡೆಸಿದರು. ರಾಜ್ಯ ಸರಕಾರ ಬೇಡಿಕೆ ಈಡೇರಿಸುವವರೆಗೂ ವೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯು ನಗರದ ಡಿವಿಎಸ್ ಹಾಗೂ ಸರಕಾರಿ ಕಾಲೇಜು ಆವರಣದಲ್ಲಿ ವೌಲ್ಯಮಾಪನ ಕೇಂದ್ರ ತೆರೆದಿದೆ. ಡಿವಿಎಸ್ ಕಾಲೇಜ್‌ನಲ್ಲಿ ರಾಜ್ಯಶಾಸ್ತ್ರ ಹಾಗೂ ಸರಕಾರಿ ಕಾಲೇಜ್‌ನಲ್ಲಿ ಅರ್ಥಶಾಸ್ತ್ರ ವಿಷಯದ ವೌಲ್ಯಮಾಪನಕ್ಕೆ ವ್ಯವಸ್ಥೆ ಮಾಡಲಾಗಿದೆ. ವೌಲ್ಯಮಾಪನ ಕಾರ್ಯಕ್ಕಾಗಿಯೇ ಸುಮಾರು 600 ಉಪನ್ಯಾಸಕರ ನಿಯೋಜನೆ ಮಾಡಲಾಗಿದೆ. ಮಂಗಳವಾರದಿಂದ ಆರಂಭವಾಗುವ ವೌಲ್ಯಮಾಪನ ಕಾರ್ಯಕ್ಕೆ ಪೂರ್ವಭಾವಿಯಾಗಿ ರವಿವಾರ ಹಾಗೂ ಸೋಮವಾರ ಉತ್ತರ ಪತ್ರಿಕೆಗಳ ಬಂಡಲ್ ಒಡೆದು ಪತ್ರಿಕೆಗಳ ಕೋಡಿಂಗ್ - ಡಿಕೋಡಿಂಗ್ ಮಾಡಬೇಕಾಗಿತ್ತು. ಆದರೆ ಈ ಪೂರ್ವಭಾವಿ ಕೆಲಸವೇ ಆಗಿಲ್ಲ. ಸ್ಟ್ರಾಂಗ್ ರೂಂನಲ್ಲಿರುವ ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನೇ ಹೊರತರಲಾಗಿಲ್ಲ. ಪ್ರತಿಭಟನೆ:
ಈ ಮೊದಲೇ ಘೋಷಿಸಿದ್ದಂತೆ ಪಿಯು ಉಪನ್ಯಾಸಕರು ಮಂಗಳವಾರ ಬೆಳಗ್ಗೆ ವೌಲ್ಯಮಾಪನ ಕೇಂದ್ರಗಳಿಗೆ ಆಗಮಿಸಿದರು. ವೌಲ್ಯಮಾಪನ ಕಾರ್ಯದಲ್ಲಿ ಮಾತ್ರ ಭಾಗಿಯಾಗಲಿಲ್ಲ. ಕೇಂದ್ರಗಳ ಮುಂಭಾಗ ವೌಲ್ಯಮಾಪನ ಬಹಿಷ್ಕಾರದ ಬ್ಯಾನರ್ ಹಾಕಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಕೆಲ ಗಂಟೆಗಳ ನಂತರ ಕೇಂದ್ರದಿಂದ ಹೊರತೆರಳಿದರು. ‘ಕಳೆದ ಹಲವು ತಿಂಗಳುಗಳ ಹಿಂದೆಯೇ ವೌಲ್ಯಮಾಪನ ಬಹಿಷ್ಕಾರದ ಎಚ್ಚರಿಕೆ ನೀಡಲಾಗಿತ್ತು. ಆದಾಗ್ಯೂ ಸರಕಾರ ಬೇಡಿಕೆ ಈಡೇರಿಕೆಗೆ ಕ್ರಮಕೈಗೊಂಡಿಲ್ಲ. ಈ ಬಾರಿ ಯಾವುದೇ ಕಾರಣಕ್ಕೂ ಬೇಡಿಕೆ ಈಡೇರುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ. ನಮ್ಮ ಬೇಡಿಕೆ ನ್ಯಾಯ ಯುತವಾಗಿದೆ. ಬೇಡಿಕೆ ಈಡೇರಿಸುವ ಅಧಿಕೃತ ಆದೇಶ ಹೊರಡಿಸುವವರೆಗೂ ವೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗುವುದಿಲ್ಲ’ ಎಂದು ಉಪನ್ಯಾಸಕ ವರ್ಗ ಸ್ಪಷ್ಟಪಡಿಸಿದೆ.